ಬೆಂಗಳೂರಿನ ಘನತೆ ಕುಸಿದಿದೆ: ಗೂಗಲ್ ಟೆಕ್ ಹಬ್ ಆಂಧ್ರ ಪಾಲಾಗಿದೆ: ವಿಜಯೇಂದ್ರ
ಬೆಂಗಳೂರು, ಅಕ್ಟೋಬರ್ 15: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಇದ್ದ ಘನತೆ, ಆಕರ್ಷಣೆಯು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿಗಳ ಉದ್ಯೋಗ ಸೃಷ್ಟಿಯ ಬೆಟ್ಟ ಕರಗುತ್ತಿದೆ, ಯುವ ಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಅದಾನಿ ಗ್ರೂಪ್ ಸಹಯೋಗದಲ್ಲಿ ಗೂಗಲ್ ಕಂಪನಿಯು ಆಂಧ್ರಪ್ರದೇಶದಲ್ಲಿ ಬರೋಬ್ಬರಿ 1.3 ಕೋಟಿ ರೂಪಾಯಿ ಹೂಡಿಕೆಯಡಿ AI ಟೆಕ್ ಹಬ್ ಕ್ಯಾಂಪಸ್ ನಿರ್ಮಿಸಲು ಮುಂದಾಗಿದೆ. ಇದರಿಂದ ಕರ್ನಾಟಕಕ್ಕೆ ಸಾಕಷ್ಟು ನಷ್ಟವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬೆಳವಣಿಗೆಗೆ ಸಂಬಂದಿಸಿದಂತೆ ವಿಜಯೇಂದ್ರ ಅವರು ಎಕ್ಸ್ ಪೋಸ್ಟ್ ಮಾಡಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಘನತೆ ಕುಸಿಯುತ್ತಿದೆ. ಅಲ್ಲದೇ ಎಲ್ಲೆಂದರಲ್ಲಿ ಗುಂಡಿ ಬಿದ್ದ ರಾಜಧಾನಿಯ ಪರಿಸ್ಥಿತಿಗೆ "ಅಂತಾರಾಷ್ಟ್ರೀಯ ಉದ್ಯಮಗಳು ಬೆಂಗಳೂರಿನಿಂದ ವಿಮುಖವಾಗುತ್ತಿವೆ'. ರಾಜ್ಯಕ್ಕೆ ಬರಬೇಕಿದ್ದ ಜಾಗತಿಕ ದಿಗ್ಗಜ Google ಸಂಸ್ಥೆಯ ಬರೋಬ್ಬರಿ 30,000 ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವ ₹1.3 ಲಕ್ಷ ಕೋಟಿ ರೂ ಹೂಡಿಕೆ ನೆರೆ ರಾಜ್ಯ ಆಂಧ್ರ ಪ್ರದೇಶದ ಪಾಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವದ ಜನರನ್ನು ಸೆಳೆಯುತ್ತಿದ್ದ ಬೆಂಗಳೂರನ್ನು "ಗುಂಡಿಗಳ ಬೆಂಗಳೂರು' ಎಂಬ ಅಪಖ್ಯಾತಿ ಅಂಟಿಸಿರುವ ಈ ಸರ್ಕಾರದ ನಡೆಯಿಂದಾಗಿ ಹಾಗೂ ಬೆಂಗಳೂರು ಉಸ್ತುವಾರಿ ಹೊತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಇಚ್ಚಾಶಕ್ತಿ ಹಾಗೂ ವೈಫಲ್ಯದ ಕಾರಣದಿಂದಾಗಿ ಕನ್ನಡಿಗರಿಗೆ ಸಿಗಬೇಕಿದ್ದ ಸಾವಿರಾರು ಉದ್ಯೋಗಗಳು ನೆರೆ ರಾಜ್ಯದ ಪಾಲಾಗುತ್ತಿವೆ.
ಅಭಿವೃದ್ಧಿಯನ್ನು ಸಂಪೂರ್ಣ ಮರೆತ ಕಾಂಗ್ರೆಸ್ ಸರ್ಕಾರ ಕನಿಷ್ಠ ಬಂಡವಾಳ ಹೂಡುವ ಉದ್ಯಮ ಕ್ಷೇತ್ರವನ್ನೂ ಹಿಡಿದಿಟ್ಟುಕೊಳ್ಳುವ ಪ್ರಾಮಾಣಿಕ ಕಾಳಜಿಯ ಪ್ರತೀಕವಾಗಿ, ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸುವಲ್ಲಿಯೂ ವಿಫಲವಾಗಿರುವುದು ಕರ್ನಾಟಕ ರಾಜ್ಯದ ದುರಂತವೇ ಸರಿ ಎಂದು ದೂರಿದ್ದಾರೆ.












Click it and Unblock the Notifications