ಬೆಂಗಳೂರಿಗರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್
ಬೆಂಗಳೂರು, ನವೆಂಬರ್, 01: ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಎಂಆರ್‌ಪಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹಾಗಾದರೆ ಯಾವೆಲ್ಲ ಉತ್ಪನ್ನಗಳನ್ನು ಮಾರಾಟ ಮಾಡಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕೇಂದ್ರ ಸರ್ಕಾರವು ಕಡಿಮೆ ದರದಲ್ಲಿ ಭಾರತ್ ಉತ್ಪನ್ನಗಳಾದ ಅಕ್ಕಿ, ಬೇಳೆ ಕಾಳುಗಳ ಪೂರೈಕೆಗೆ ಕ್ರಮ ಕೈಗೊಂಡಿದೆ. ಇದೀಗ ಬೆಂಗಳೂರಿನಲ್ಲಿ ಈ ಉತ್ಪನ್ನಗಳ ಮಾರಾಟ ಮತ್ತೆ ಶುರು ಆಗಿದೆ. ಭಾರತ್ ಉತ್ಪನ್ನಗಳ ಹಂತ 2ರಲ್ಲಿ ಬೆಂಗಳೂರಿನಲ್ಲಿ ಈ ಉತ್ಪನ್ನಗಳು ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಿಂದ ಈ ಯೋಜನೆಯಡಿ ಬೆಂಗಳೂರಿನಲ್ಲಿ 34 ರೂಪಾಯಿಗೆ ಕೆ.ಜಿ. ಅಕ್ಕಿ, 30 ರೂಪಾಯಿಗೆ ಗೋಧಿ ಹಿಟ್ಟು, 70 ರೂಪಾಯಿಗೆ ಕಡಲೆಬೇಳೆ, 107 ರೂಪಾಯಿಗೆ ಹೆಸರುಬೇಳೆ ಲಭ್ಯವಾಗಲಿದೆ. ಮಾರುಕಟ್ಟೆಯಲ್ಲಿ ಕೆ.ಜಿ. ಅಕ್ಕಿ ಬೆಲೆ 55-60 ರೂಪಾಯಿ, ಗೋಧಿ 45-50 ರೂಪಾಯಿ, ಕಡಲೆಬೇಳೆ 90-100 ರೂಪಾಯಿ, ಹೆಸರುಬೇಳೆ 120-130 ರೂಪಾಯಿಗೆ ಮಾರಾಟ ಆಗುತ್ತಿದೆ.
ಈಗಾಗಲೇ ಬೆಲೆ ಏರಿಕೆಯಿಂದ ಬೇಸತ್ತಿರುವ ಜನಸಾಮಾನ್ಯರಿಗೆ ದೀಪಾವಳಿ ಹಬ್ಬದ ವೇಳೆಯೇ ಕೇಂದ್ರ ಸರ್ಕಾರ ಈ ಸಿಹಿಸುದ್ದಿಯನ್ನು ನೀಡಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಭಾರತ್ ಅಕ್ಕಿ, ಬೇಳೆ ಕಾಳುಗಳನ್ನು ವಾಹನಗಳ ಮೂಲಕ ವಿತರಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಅವರು ಆಹಾರ ಧಾನ್ಯ ಪೂರೈಕೆ ವಾಹನಕ್ಕೆ ನವದೆಹಲಿಯ ಕೃಷಿ ಭವನದಲ್ಲಿ ಚಾಲನೆ ನೀಡಿದ್ದರು.












Click it and Unblock the Notifications