ಇನ್ವೆಸ್ಟ್ ಕರ್ನಾಟಕ 2025: ಸಮಾವೇಶದಲ್ಲಿ 75 ಸಾಕರು, 19 ದೇಶಗಳು ಭಾಗಿ, ರಾಜ್ಯ ಕೈಗಾರಿಕೆ ನೀತಿ ಜಾರಿ: ಎಂಬಿ ಪಾಟೀಲ
ಬೆಂಗಳೂರು, ಫೆಬ್ರವರಿ 07: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಫೆಬ್ರವರಿ 11ರಿಂದ 14ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ 2025 ನಡೆಯಲಿದೆ. ಇದಕ್ಕಾಗಿ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಕೇಂದ್ರ ಸಚಿವರು ಸೇರಿದಂತೆ ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ, ಎಷ್ಟು ದೇಶಗಳು, ಸಾಧಕರು ಭಾಗವಹಿಸಲಿದ್ದಾರೆ ಎಂಬುದು ಇಲ್ಲಿದೆ.
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸುವಂತೆ ದೆಹಲಿಗೆ ತೆರಳಿದ್ದ ಎಂಬಿ ಪಾಟೀಲ್ ಅವರು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.

ಮೊದಲಿಗೆ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ಮಾಡಿದ ಸಚಿವರು, ನಂತರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಅಲ್ಲಿಂದ ಜೋಶಿ ಅವರ ಸಂಸತ್ತಿನ ಕಚೇರಿಗೆ ತೆರಳಿದ ಪಾಟೀಲರು, ಅವರ ಕಚೇರಿಯಲ್ಲಿ ಸಮಾವೇಶ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕಂಡ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸುವಂತೆ ಆಮಂತ್ರಣ ನೀಡಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 75 ಪ್ರಮುಖ ಸಾಧಕರು ಚರ್ಚೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಾರೆ 19 ದೇಶಗಳು ಭಾಗವಹಿಸಲಿವೆ. ಇಲ್ಲಿ 9 ಪ್ರತ್ಯೇಕ ಕಂಟ್ರಿ ಪೆವಿಲಿಯನ್‌ಗಳು ಹೂಡಿಕೆ ಅವಕಾಶಗಳು ಮತ್ತು ವಾಣಿಜ್ಯ ಬಾಂಧವ್ಯ ಸಹಯೋಗದ ಅವಕಾಶಗಳನ್ನು ಪ್ರದರ್ಶಿಸಲಿವೆ. ಮಲೇಷ್ಯಾ, ದಕ್ಷಿಣ ಕೊರಿಯಾ, ಫ್ರಾನ್ಸ್, ನೆದರ್‌ಲ್ಯಾಂಡ್ಸ್, ಜಪಾನ್, ಥಾಯ್ಲೆಂಡ್, ನಾರ್ವೆ, ಇಸ್ರೇಲ್, ಜರ್ಮನಿ, ಆಸ್ಟ್ರೇಲಿಯಾ, ಸ್ವಿಟ್ಜರ್‌ಲ್ಯಾಂಡ್, ತೈವಾನ್, ಡೆನ್ಮಾರ್ಕ್, ಬ್ರಿಟನ್, ಸ್ಲೊವೆನಿಯಾ, ಬಹ್ರೇನ್, ಪೋಲಂಡ್, ಇಟಲಿ ಹಾಗೂ ಮತ್ತು ಸಿಂಗಪುರ ಭಾಗವಿಸಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ʼಏರೊಸ್ಪೇಸ್, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ಅತ್ಯಾಧುನಿಕ ತಯಾರಿಕೆ ವಲಯಗಳಲ್ಲಿ ಕರ್ನಾಟಕವು ಬಂಡವಾಳ ಹೂಡಿಕೆಗೆ ಮುಂಚೂಣಿಯಲ್ಲಿದೆ. ಇದನ್ನು ಜಾಗತಿಕ ಉದ್ಯಮ ಜಗತ್ತಿಗೆ ಸಮಾವೇಶದ ಮೂಲಕ ಪರಿಚಯಿಸಲಾಗುವುದು.

ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು, ಡಿಫೆನ್ಸ್, ಜೈವಿಕ ತಂತ್ರಜ್ಞಾನ, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಗರಿಷ್ಠ ನಿಖರತೆಯ ಬಿಡಿಭಾಗ ತಯಾರಿಕಾ ವಲಯಗಳಲ್ಲಿನ ಇತ್ತೀಚಿನ ಬೆಳವಣಿಗೆಯ ಮೇಲೆ ಫ್ಯೂಚರ್ ಆಫ್ ಇನ್ನೊವೇಷನ್ ಎಕ್ಸ್‌ಪೊ ಬೆಳಕು ಚೆಲ್ಲಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ನವೋದ್ಯಮಗಳ ಬೆಳವಣಿಗೆಗೆ ಸಮಾವೇಶವು ಪೂರಕವಾಗಲಿದೆ. ಡಿಜಿಟಲೀಕರಣ ಅಳವಡಿಸಿಕೊಳ್ಳಲು 2,000ಕ್ಕೂ ಹೆಚ್ಚು ಎಸ್‌ಎಂಇಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಡಿಜಿಟಲ್ ಪರಿವರ್ತನೆಗೆ 100 ಎಸ್‌ಎಂಇಗಳಿಗೆ ಅಗತ್ಯ ನೆರವು ಕಲ್ಪಿಸಲಾಗುವುದು. ತಯಾರಿಕೆ ಹಾಗೂ ಪರಿಸರ ಸ್ನೇಹಿ ನವೋದ್ಯಮಗಳಿಗೆ ಉತ್ತೇಜನ ನೀಡುವ ಕೆಲಸಗಳು ಈ ಸಮಾವೇಶದಲ್ಲಿ ಆಗಲಿದೆ.
ಕೃತಕ ಬುದ್ಧಿಮತ್ತೆ ಆಧಾರಿತ ಎಸ್‌ಎಂಇ ಕನೆಕ್ಟ್ ಅಂತರ್ಜಾಲ ತಾಣ ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕ ಹೊಸ ಕೈಗಾರಿಕಾ ನೀತಿ (2024-29) ಜಾರಿ ಮಾಡಲಾಗುವುದು. ಇದೇ ವೇಳೆ ಹಣಕಾಸು ಹಾಗೂ ಹಣಕಾಸೇತರ ಉತ್ತೇಜನಾ ಕ್ರಮಗಳಿಗಾಗಿ ವಿದೇಶಿ ಕಂಪನಿಗಳನ್ನು ಆಹ್ವಾನಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
'ಬಂಡವಾಳ ಹೂಡಿಕೆ ಸುಲಲಿತಗೊಳಿಸಲು ಎಐ ತಂತ್ರಜ್ಞಾನ ಸಹಾಯದಿಂದ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು ಭೂಮಿ ಹಂಚಿಕೆ, ಹೂಡಿಕೆದಾರರ ಕುಂದುಕೊರತೆ ನಿವಾರಣೆ ಮಾಡಲಿದೆ. 'ಆನಂದ ಮಹೀಂದ್ರಾ, ಕಿರಣ್ ಮಜುಂದಾರ್ ಶಾ, ಮಾರ್ಟಿನ್ ಲುಂಡ್‌ಸ್ಟೆಡ್ಟ್, ಕುಮಾರ್ ಮಂಗಳಂ ಬಿರ್ಲಾ, ಜಾರ್ಜ್ ಪಪಂಡ್ರೆವು ಹಾಗೂ ಮುಂತದಾವರು ಉದ್ದಿಮೆ, ತಂತ್ರಜ್ಞಾನ ಮತ್ತು ಕೈಗಾರಿಕಾ ಪರಿವರ್ತನೆ ಕುರಿತು ಮಾಹಿತಿ ನೀಡಲಿದ್ದಾರೆ.
ಸಮಾವೇಶದ ಹೆಚ್ಚಿನ ಮಾಹಿತಿಗಾಗಿ ನೋಂದಣಿಗೆ https://investkarnataka.co.in/gim2025/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.












Click it and Unblock the Notifications