Heart Attack: ಕಬಡ್ಡಿ ಆಡುತ್ತಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ
ಸಹಪಾಠಿಗಳ ಜೊತೆ ಆಟವಾಡುತ್ತಿದ್ದ ವೇಳೆ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು, ಫೆಬ್ರವರಿ 09: ಸಹಪಾಠಿಗಳ ಜೊತೆ ಆಟವಾಡುತ್ತಿದ್ದ ವೇಳೆ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹದಿಹರೆಯ ಯುವಕ-ಯುವತಿಯರಲ್ಲಿ ಹೆಚ್ಚಾಗುತ್ತಿದೆ. ಈ ವಿದ್ಯಾರ್ಥಿನಿಯದ್ದು ಇನ್ನೂ ಚಿಕ್ಕ ವಯಸ್ಸು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗೆಳತಿಯರ ಜೊತೆ ಕಬಡ್ಡಿ ಆಟವಾಡುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿದೆ.
ಮೃತ ವಿದ್ಯಾರ್ಥಿನಿ ಪ್ರಥಮ ಪಿಯುಸಿ ಓದುತ್ತಿದ್ದ ಸಂಗೀತಾ (17) ಎಂದು ಗುರುತಿಸಲಾಗಿದೆ. ಈ ಧಾರುಣ ಘಟನೆ ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆ ಆವರಣದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸಾವಿನ ಸುದ್ದಿ ತಿಳಿದು ಸಂಗೀತಾರ ಸ್ನೇಹಿತರು, ಪೋಷಕರ ಕಣ್ಣಿರ ಕೋಡಿ ಹರಿದಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ಮೃತರು ಧಾರವಾಡ ಮೂಲದವರಾಗಿದ್ದು, ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ವಾಸವಿದ್ದರು. ಕಬಡ್ಡಿ ಆಡುವಾಗ ಒಮ್ಮೆಲೆ ಕುಸಿದು ಬಿದ್ದ ಸಂಗೀತಾರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮಾರ್ಗ ಮಧ್ಯವೇ ಪ್ರಾಣಬಿಟ್ಟಿರುವುದಾಗಿ ವೈದ್ಯರು ಆಸ್ಪತ್ರೆಯಲ್ಲಿ ತಿಳಿಸಿದರು.
ಕ್ರೀಡಾ ಉತ್ಸವದಲ್ಲಿ ಮಹಿಳೆಯರ ತಂಡದ ಕಬಡ್ಡಿ ಆಯೋಜನೆಗೊಂಡಿತ್ತು. ಈ ವೇಳೆ ಸಂಗೀತಾ ಅವರು ತಮ್ಮ ತಂಡದ ಪರ ರೈಡ್ ಗೆ ತೆರಳಿದ್ದರು. ಪ್ರತಿ ತಂಡದ ಸದಸ್ಯರು ಸಂಗೀತಾರನ್ನು ಕ್ಯಾಚ್ ಮಾಡಲು ಮುಂದಾದಾಗ ಅವರಿಗೆ ಎದೆ ಹಿಡಿದುಕೊಂಡು ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಶಾಲಾ ಆಡಳಿತ ಮಂಡಳಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಸದ್ಯ ವಿದ್ಯಾರ್ಥಿನಿ ಸಾವಿನ ನಂತರ ಕಾಲೇಜಿಗೆ ರಜೆ ನೀಡಲಾಗಿದೆ. ಸಂಗೀತಾ ಮೃತದೇಹವನ್ನು ಅತ್ತಿಬೆಲೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

ಹೃದಯಾಘಾತಕ್ಕೆ ವಯಸ್ಕರೇ ಹೆಚ್ಚು ಬಲಿ
ಹಿರಿಯರು, ಮಧ್ಯ ವಯಸ್ಕರು ಸೇರಿದಂತೆ ಮಕ್ಕಳಲ್ಲೂ ಈ ಹೃದಯಾಘಾತ (Heart Attack) ಸಾಮಾನ್ಯ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಯುವಕರೇ ಇತ್ತೀಚೆಗೆ ಇಂತಹ ಘಟನೆಗೆ ಹೆಚ್ಚು ಒಳಗಾಗುತ್ತಿರುವುದು ಕಂಡು ಬಂದಿದೆ. ಮೂಲಗಳ ಪ್ರಕಾರ 20 ರಿಂದ 45 ವಯಸ್ಸಿನೊಳಗಿನ ಪುರುಷರು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ವರ್ಷದ ಹಿಂದಷ್ಟೇ ಅಗಲಿದ ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜಕುಮಾರ್ ಅವರ ನಿಧಾನನಂತರ ಹೃದಯ ತಪಾಸಣೆಗೆ ಒಳಗಾಗುವುದು ಹೆಚ್ಚಾದರೂ ಸಹ ಹೃದಯಾಘಾತದಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗದಿರುವುದು ಬೇಸರ ಸಂಗತಿಯಾಗಿದೆ.












Click it and Unblock the Notifications