ಬಡ, ನಿರ್ಗತಿಕ ಮಕ್ಕಳಿಗೆ ಒಂದಿಷ್ಟು ಕೊಡ್ರಪಾ ಅಂದ್ರೆ!

ಬೆಂಗಳೂರು, ಅ. 5 : ಊಟ ಉಚಿತ! ಅಂತ ಘೋಷಿಸಿದರೆ ಸಾಕು. ಜಾತ್ರೆಗೆ ಬಂದಂತೆ ಸಂಸಾರ ಸಮೇತರಾಗಿ ತಂಡೋಪತಂಡವಾಗಿ ಬಂದು ಕೊಟ್ಟದ್ದನ್ನು ತಿಂದು ಹೋಗುವವರೇ ಹೆಚ್ಚು. ಆದರೆ, ಬಡಬಗ್ಗರಿಗೆ, ನಿರ್ಗತಿಕರಿಗೆ, ಬಡ ವಿದ್ಯಾರ್ಥಿಗಳಿಗೆ ಒಂದಿಷ್ಟು ಕೊಡ್ರಪಾ ಅಂದರೆ, ಅವತ್ತೇ ಸಿಕ್ಕಾಪಟ್ಟೆ ಕೆಲಸ ಬಂದುಬಿಡುತ್ತದೆ ಅಥವಾ ಮನೆಗೆ ನೆಂಟರು ಬಂದುಬಿಡುತ್ತಾರೆ.

ಅಕ್ಟೋಬರ್ 5ರ ಶನಿವಾರ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ, ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆ 'ಜಾಯ್ ಆಫ್ ಗಿವಿಂಗ್ ವೀಕ್' ಕಾರ್ಯಕ್ರಮದ ಭಾಗವಾಗಿ ಆಯೋಜಿಸಿದ್ದ 'ಜೆನರಾಸಿಟಿ 2013' ದಾನಧರ್ಮದ ಮೇಳದಲ್ಲಿ ಕಂಡುಬಂದಿದ್ದು ಇದೇ. ಮೈದಾನದಲ್ಲೆಲ್ಲೂ ಸ್ಟಾಲ್ ಇಟ್ಟುಕೊಂಡಿರುವ ಸರಕಾರೇತರ ಸಂಸ್ಥೆಯವರದೇ ಕಲರವ.

ಅಕ್ಕಪಕ್ಕದವರು ಮಾತನಾಡಿದರೂ ಕೇಳದಷ್ಟು ಅಬ್ಬರದಿಂದ ಬಾರಿಸುತ್ತಿದ್ದ ಬ್ಯಾಂಡ್ ಮುಂದೆ ಇಡಲಾಗಿದ್ದ ನೂರಾರು ಪ್ಲಾಸ್ಟಿಕ್ ಚೇರುಗಳು ಬಿರುಬೇಸಿಗೆಯಲ್ಲಿ ಪರಿತಪಿಸುತ್ತಿದ್ದವು. ಶ್ರೋತೃಗಳು ಇಲ್ಲದಿದ್ದರೇನಂತೆ ಕುರ್ಚಿಗಳಾದರೂ ಇವೆಯಲ್ಲ ಎಂದು ಸಂಗೀತಗಾರರೂ ರಾಕ್ ಬ್ಯಾಂಡ್ ಬಜಾಯಿಸುತ್ತಿದ್ದರು. ಆದರೆ, ಇಡೀ ಮೈದಾನದಲ್ಲಿ ಸಂಭ್ರಮಕ್ಕೇನೂ ಬರವಿರಲಿಲ್ಲ.

ಬೆಂಗಳೂರು ಮಾತ್ರವಲ್ಲ ತುಮಕೂರು, ಕನಕಪುರ, ಕೊಪ್ಪಳ, ತಮಿಳುನಾಡಿನ ಸೇಲಂನಿಂದಲೂ, ಬಡವಕ್ಕಳಿಗೆ ವಿದ್ಯಾಭ್ಯಾಸ, ಕ್ಷಯರೋಗಿಗಳಿಗೆ ಶುಶ್ರೂಶೆ, ಎಚ್ಐವಿ ಪೀಡಿತರಿಗೆ ಆಶ್ರಯ ಮುಂತಾದ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ 45ಕ್ಕೂ ಹೆಚ್ಚು ಎನ್‌ಜಿಓ(ಸರಕಾರೇತರ ಸಂಸ್ಥೆ)ಗಳು ಹಣ ಕ್ರೋಢೀಕರಿಸಲು ಮತ್ತು ತಾವೇ ತಯಾರಿಸಿದ್ದ ವಸ್ತುಗಳನ್ನು ಮಾರಾಟ ಮಾಡಲು ಮಳಿಗೆ ಹಾಕಿಕೊಂಡಿದ್ದರು. [ಜೆನರಾಸಿಟಿ ಚಿತ್ರಪಟ]

ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ಎಂದು ಹೇಳಲಾಗಿತ್ತಾದರೂ 12 ಗಂಟೆಯಾದರೂ ಅದರ ಸುದ್ದಿಯಿರಲಿಲ್ಲ. ಕಡೆಗೂ ಆರಂಭವಾದ ಕಾರ್ಯಕ್ರಮದಲ್ಲಿ ಅಚ್ಚರಿ ಮೂಡಿಸಿದ್ದೆಂದರೆ ಭಿಕ್ಷುಕರ ತಂಡ ತಾವಾಗಿಯೇ ತಯಾರಿಸಿದ ಕರಕುಶಲ ವಸ್ತುಗಳನ್ನು ಈ ಉದಾತ್ತ ಕಾರಣಕ್ಕಾಗಿ ದಾನವಾಗಿ ನೀಡಿದ್ದು. ಕಣ್ಣಿಲ್ಲದವರು, ಕೈಬೆರಳು ಕಳೆದುಕೊಂಡವರು ತಮ್ಮ ಕೈಲಾದಷ್ಟು ಕಾಣಿಕೆ ನೀಡುತ್ತಿದ್ದರೂ ಅಲ್ಲಿ ಚಪ್ಪಾಳೆ ಹೊಡೆಯುವವರು ದಿಕ್ಕಿರಲಿಲ್ಲ!

ಅಲ್ಲಲ್ಲಿ ಬೆರಳೆಣಿಕೆಯ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ, ಒನ್ಇಂಡಿಯಾ ಕೂಡ ಭಾಗವಹಿಸಿರುವ ಗಲ್ಲಿ ಕ್ರಿಕೆಟ್ ನಡೆಯುತ್ತಿದ್ದವು. ಕಿವುಡ ಮೂಗರ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯಕ್ಕಾಗಿ ನೆರಳಿನಲ್ಲಿ ಕಾದು ಕುಳಿತಿದ್ದರೆ, ಕನಕಪುರದ 'ಚಿಲುಮೆ' ಸಂಸ್ಥೆಯ ಮಕ್ಕಳು ಕೋಲಾಟವಾಡಲು ಕಾದು ನಿಂತಿದ್ದರು. ಮೈದಾನದ ಮಧ್ಯದಲ್ಲಿ ಇಡಲಾಗಿದ್ದ ಗಿಡದ ಟೊಂಗೆಯ ಮೇಲೆ ಯಾವುದಕ್ಕೆ ಎಷ್ಟು ನೀಡಬೇಕು ಎಂದು ಟ್ಯಾಗ್ ಹಾಕಿದ್ದರು. ಅಲ್ಲಿನ ಸಂಭ್ರಮವನ್ನು ಚಿತ್ರಗಳಲ್ಲಿಯೇ ನೋಡಿ ಆನಂದಿಸಿ.

ಪರಿವರ್ತಿತ ಭಿಕ್ಷುಕರಿಗೆ 2 ಪಾರ್ಲೆಜಿ

ಪರಿವರ್ತಿತ ಭಿಕ್ಷುಕರಿಗೆ 2 ಪಾರ್ಲೆಜಿ

ಸುಮನಹಳ್ಳಿ ಮೇಲುಸೇತುವೆ ಬಳಿಯಿರುವ ಕ್ಷಯರೋಗಿಗಳ ಪುನರ್ವಸತಿ ಮತ್ತು ತರಬೇತಿ ಸಂಸ್ಥೆಯ ಪರಿವರ್ತಿತ ಭಿಕ್ಷಕರು ನೀಡಿದ ದಾನಕ್ಕೆ ಪ್ರತಿಯಾಗಿ ಅವರ ಕಿಸೆಗೆ ಎರಡೆರಡು ಪಾರ್ಲೆಜಿ (4 ರು.) ಬಿಸ್ಕೆಟ್ ಪಾಕೀಟನ್ನು ಹಾಕಲಾಯಿತು. ಮಧುಗಿರಿ, ಹುಬ್ಬಳ್ಳಿ, ಕಲಘಟಗಿ, ತುಮಕೂರು ಮೂಲದ ಈ ವಯಸ್ಕರು ಪಾರ್ಲೆಜಿ ಅಚ್ಛಾಜಿ ಎಂದು ವೇದಿಕೆಯಿಂದಿಳಿದು ಹೊರಟರು. ಆದರೆ ಅವರ ಮುಖದಲ್ಲಿ ಅದೇನೋ ಸಾರ್ಥಕ ಭಾವ ನಗುತ್ತಿತ್ತು.

ಬಡ ಬಾಲೆಯರ ಸೇವೆಗೆ ಯುಕೆ ಯುವತಿಯರು

ಬಡ ಬಾಲೆಯರ ಸೇವೆಗೆ ಯುಕೆ ಯುವತಿಯರು

ಒಬ್ಬಳು ವಿಕ್ಟೋರಿಯಾ ಮತ್ತೊಬ್ಬಳು ಜೇನ್. ಇಬ್ಬರೂ ಯುನೈಟೆಡ್ ಕಿಂಗಡಂನ ಯುವತಿಯರು. ಹೆಸರಘಟ್ಟದಲ್ಲಿರುವ 'ಬಾಲೆ ಮನೆ' ಎಂಬ ವಿದ್ಯಾರ್ಥಿನಿಯರ ಆಶ್ರಯತಾಣದಲ್ಲಿ ಕಳೆದೆರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 60ಕ್ಕೂ ಹೆಚ್ಚು ನಿರ್ಗತಿಕ ವಿದ್ಯಾರ್ಥಿನಿಯರು ಮೇರಿ ಎಂಬುವವರು ನಡೆಸುತ್ತಿರುವ ಶಾಲೆಯಲ್ಲಿ ಶಿಕ್ಷಕಿಯರಾಗಿದ್ದಾರೆ.

ಬಾಲೆ ಮನೆ ಕಲಾವಿದರೊಂದಿಗೆ ವಿಕ್ಟೋರಿಯಾ

ಬಾಲೆ ಮನೆ ಕಲಾವಿದರೊಂದಿಗೆ ವಿಕ್ಟೋರಿಯಾ

ಕೌಟುಂಬಿಕ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳು, ಮನೆಬಿಟ್ಟು ಓಡಿಹೋದವರು, ನಿರ್ಗತಿಕ ಹೆಣ್ಣುಮಕ್ಕಳನ್ನು ಅವರಿಗೆ ಇಷ್ಟವಾಗುವಂಥ ಶೈಕ್ಷಣಿಕ ಮತ್ತು ಸಾಂಸ್ಕೃತಿ ವಾತಾವರಣದಲ್ಲಿ ತರಬೇತಿ ನೀಡಲಾಗುತ್ತಿದೆ ಎನ್ನುತ್ತಾರೆ ಲಂಡನ್ನಿನ ವಿಕ್ಟೋರಿಯಾ. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ತಯಾರಾಗಿ ಬಂದ ವಿದ್ಯಾರ್ಥಿನಿಯರೊಂದಿಗೆ ವಿಕ್ಟೋರಿಯಾ.

ಶೀಲಾ ಕೋಥಾವಾಲಾ ಶಾಲೆಯ ಮಕ್ಕಳು

ಶೀಲಾ ಕೋಥಾವಾಲಾ ಶಾಲೆಯ ಮಕ್ಕಳು

ಉತ್ಸಾಹದ ಚಿಲುಮೆಯಂತಿದ್ದ ಈ ಮಕ್ಕಳು ಸಮಕಾಲೀನ ನೃತ್ಯ ಪ್ರದರ್ಶನ ನೀಡಲು ಕೆನೆದಾಡುತ್ತಿದ್ದರು. ಆ ಈ ಮಕ್ಕಳು ಸಂಜ್ಞೆಗೆ ಮಾತ್ರ ಸ್ಪಂದಿಸುವವರು. ಹಳೆ ಏರ್ಪೋರ್ಟ್ ರಸ್ತೆಯಲ್ಲಿರುವ ಶೀಲಾ ಕೋಥಾವಾಲಾ ಕಿವುಡ ಮತ್ತು ಮೂಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ. ದಾನಿಗಳು ಪ್ರತಿ ವಿದ್ಯಾರ್ಥಿಗೆ 5,000 ರು. ದಾನ ನೀಡಬಹುದು.

ಮಧುಗಿರಿಯ ರಮೇಶನ ವಿಶಿಷ್ಟ ಕಥೆ

ಮಧುಗಿರಿಯ ರಮೇಶನ ವಿಶಿಷ್ಟ ಕಥೆ

ಈ ಚಿತ್ರದ ಎಡತುದಿಯಲ್ಲಿ ಇರುವವರು ಮಧುಗಿರಿಯ ರಮೇಶ್ ಬಾಬು ಎಂಬುವವರು. ಕ್ಷಯರೋಗಕ್ಕೆ ತುತ್ತಾಗಿದ್ದ ಅವರನ್ನು ಮನೆಯವರೇ ಮನೆಬಿಟ್ಟು ಓಡಿಸಿದರಂತೆ. ನಂತರ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಅವರನ್ನು ಕರೆದುಕೊಂಡು ಬಂದು ಸುಮನಹಳ್ಳಿ ಕ್ಷಯರೋಗ ಪುನರ್ವಸತಿ ಮತ್ತು ತರಬೇತಿ ಸಂಸ್ಥೆ ಆಶ್ರಯ ಮತ್ತು ತರಬೇತಿ ನೀಡಿ ಮಾನವೀಯತೆ ಮೆರೆಯಿತು ಎಂದು ನೆನೆಯುತ್ತಾರೆ.

ಮಕ್ಕಳಲ್ಲಿ ಧೈರ್ಯ ತುಂಬಿದ ಹೆಮ್ಮೆ

ಮಕ್ಕಳಲ್ಲಿ ಧೈರ್ಯ ತುಂಬಿದ ಹೆಮ್ಮೆ

ಜೆರೋಮ್ ಎಮಿಲಿಯಾನಿ (ಎಡತುದಿ) ಅವರು ರಾಮನಗರ ಜಿಲ್ಲೆಯ ಕನಕಪುರ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ವಂಚಿತ ತಾಂಡಾದ ಮಕ್ಕಳಿಗೆ 'ಚಿಲುಮೆ' ಸಂಸ್ಥೆಯ ಮುಖಾಂತರ ವಿದ್ಯಾಭ್ಯಾಸ ಒದಗಿಸುತ್ತಿದ್ದಾರೆ. ಮಕ್ಕಳನ್ನು ಸ್ವತಂತ್ರವಾಗಿ ನಿಲ್ಲುವಂತೆ ಮಾಡುವುದಲ್ಲದೆ, ಕಾವೇರಿ-ಅರ್ಕಾವತಿ ಸಂಗಮದಲ್ಲಿ ಪರಿಸರ ಉಳಿಸಲು ಮಕ್ಕಳೊಂದಿಗೆ ಜಾಥಾ ಆಯೋಜಿಸುತ್ತಾರೆ.

ಈ ಮರ ಮಾರಾಟಕ್ಕಿಲ್ಲ!

ಈ ಮರ ಮಾರಾಟಕ್ಕಿಲ್ಲ!

ಈ ಮರದ ಟೊಂಗೆಟೊಂಗೆಗಳಿಗೆ ದರಗಳ ಟ್ಯಾಗ್ ಗಳನ್ನು ತೂಗ ಹಾಕಲಾಗಿದೆ. ಸಮವಸ್ತ್ರಗಳಿಗೆ, ವಿದ್ಯಾರ್ಥಿಯೊಬ್ಬನ ಪೂರ್ತಿ ವಿದ್ಯಾಭ್ಯಾಸ, ಪುಸ್ತಕ ಪೆನ್ನುಗಳಿಗೆ, ಒಂದು ತಿಂಗಳ ಊಟಕ್ಕೆ... ಹೀಗೆ ವಿವಿಧ ರೀತಿಯಲ್ಲಿ ವಿವಿಧ ಎನ್‌ಜಿಓಗಳಿಗೆ ದಾನ ನೀಡಬಹುದಾಗಿದೆ.

ಸೀರೆ ಮಾರಲು ಬಂದ ಕೊಪ್ಪಳದ ನೀರೆಯರು

ಸೀರೆ ಮಾರಲು ಬಂದ ಕೊಪ್ಪಳದ ನೀರೆಯರು

ಕೊಪ್ಪಳದ ಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಹಿಳೆಯರು ತಮ್ಮ ಸಂಸ್ಥೆಗೂ ದೇಣಿಗೆ ಹರಿದುಬರುತ್ತದೆಂದು ಸ್ಟಾಲ್ ಹಾಕಿದ್ದರು. ಅವರು 650 ರು. ಮೌಲ್ಯಕ್ಕೆ ಉತ್ತಮ ದರ್ಜೆಯ ಕಾಟನ್ ಸೀರೆಗಳನ್ನು ಮಾರಾಟಕ್ಕಿಟ್ಟಿದ್ದರು. ಆದರೆ ಇವರಿಗೆ ಅನೇಕರಿಗೆ ಇರುವಂಥ ಮಾರಾಟ ಮಾಡುವ ನೈಪುಣ್ಯತೆ ಇಲ್ಲದಿರುವುದೇ ಕೊರತೆಯಾಗಿತ್ತು. ಮಾರಾಟವಾದ ಸೀರೆಗಳೆಷ್ಟೋ?

ಈ ಜಗವೇ ಹುಚ್ಚರ ಸಂತೆ!

ಈ ಜಗವೇ ಹುಚ್ಚರ ಸಂತೆ!

ಮೇಕ್ ಅ ಡಿಫರನ್ಸ್ - ಅಂದರೆ ಸಮಾಜದಲ್ಲಿ ಬದಲಾವಣೆ ತರುವ ದೃಷ್ಟಿಯಿಂದಲೇ ಹುಟ್ಟಿಕೊಂಡಿರುವ ಈ ಸಂಸ್ಥೆಯಲ್ಲಿ ಬಹುತೇಕ ದುಡಿಯುತ್ತಿರುವ ಯುವಕ ಯುವತಿಯರೇ ಹವ್ಯಾಸಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಚ್ಎಸ್ಆರ್ ಲೇಔಟಲ್ಲಿ ಬೀಡುಬಿಟ್ಟಿರುವ ಈ ಸಂಸ್ಥೆ ಸ್ವಾದಿಷ್ಟ ಕೇಕ್ ಗಳನ್ನು ಮತ್ತು ಟಿಶರ್ಟ್ ಗಳನ್ನು ಮಾರಾಟ ಮಾಡಿ ಹಣ ಜೋಡಿಸುತ್ತಿದ್ದರು.

ಈ ದಿವ್ಯಾ ಬಲು ಚೂಟಿ ಹುಡುಗಿ

ಈ ದಿವ್ಯಾ ಬಲು ಚೂಟಿ ಹುಡುಗಿ

ದಿವ್ಯಾ ಎಂಬ ಹೆಸರಿನ ಈ ಹುಡುಗಿಯ ಹೆಸರಿನಲ್ಲಿಯೇ ಆರಂಭಿಸಲಾಗಿರುವ ದಿವ್ಯಾ ಡೌನ್ಸ್ ಡೆವಲೆಪ್ಮೆಂಟ್ ಟ್ರಸ್ಟ್ ವಿಶೇಷ ಮಕ್ಕಳಿಗಾಗಿ ಶಾಲೆಯನ್ನು ವಿವೇಕ ನಗರದಲ್ಲಿ ನಡೆಸುತ್ತಿದೆ. ಮಕ್ಕಳಿಗೆ ಕೈಹಿಡಿದು ನಡೆಯುವುದರಿಂದ ಹಿಡಿದು ಅವರು ಸ್ವತಂತ್ರವಾಗಿ ಜೀವನ ಸಾಗಿಸುವ ಹಂತದವರೆಗೆ ತರಬೇತಿ ನೀಡುತ್ತಿದ್ದಾರೆ. ಈ ಮಗು ಬಿಡಿಸಿದ ಚಿತ್ರ ಹೇಗಿದೆ ಮುಂದೆ ನೋಡಿ.

ದಿವ್ಯಾ ಬಿಡಿಸಿದ ಚಿತ್ರ

ದಿವ್ಯಾ ಬಿಡಿಸಿದ ಚಿತ್ರ

ಇಂಗ್ಲಿಷ್ ನಲ್ಲಿ ಸುಲಲಿತವಾಗಿ ಮಾತನಾಡುವುದನ್ನು ಕಲಿತಿರುವ ದಿವ್ಯಾ ಅದ್ಭುತವಾಗಿ ಚಿತ್ರವನ್ನೂ ಬಿಡಿಸುತ್ತಾಳೆ. ದಿವ್ಯಾ ಬಿಡಿಸಿರುವ ಪರಿಸರದ ಚಿತ್ರ ಮತ್ತು ಅನೇಕ ಚಿತ್ರಗಳು ಹಲವಾರು ಪ್ರದರ್ಶನಗಳಲ್ಲಿ ಪ್ರದರ್ಶಿತವಾಗಿವೆ.

ಚಿತ್ರಕಲಾ ಸ್ಪರ್ಧೆಗೆ ನೀರಸ ಪ್ರತಿಕ್ರಿಯೆ

ಚಿತ್ರಕಲಾ ಸ್ಪರ್ಧೆಗೆ ನೀರಸ ಪ್ರತಿಕ್ರಿಯೆ

ಚಿತ್ರಕಲಾ ಸ್ಪರ್ಧೆಗೆ 200 ರು. ಪ್ರವೇಶ ದರ ಇರಿಸಿದ್ದಕ್ಕೋ ಏನೋ ಅಂತಹ ಸ್ಪಂದನೆ ಇರುತ್ತಿರಲಿಲ್ಲ. ಇದ್ದಷ್ಟು ಮಕ್ಕಳು ಚಿಕ್ಕ ಜಾಗದಲ್ಲಿ ತಮಗೆ ತಿಳಿದಂತೆ ಚಿತ್ರ ಬಿಡಿಸುತ್ತಿದ್ದರು.

ಸೇಲಂನಿಂದ ಬಂದಿದ್ದ ಸುಮತಿಕಾಸಿ

ಸೇಲಂನಿಂದ ಬಂದಿದ್ದ ಸುಮತಿಕಾಸಿ

ಸೇಲಂನ ಗ್ರಾಮೀಣ ಪ್ರದೇಶದಲ್ಲಿ ನಿರ್ಗತಿಕ ಗ್ರಾಮೀಣ ವಿದ್ಯಾರ್ಥಿಗಳಿಗೆಂದೇ ಸುಮತಿಕಾಸಿ ಏಳೆಂಟು ವರ್ಷಗಳಿಂದ ಶಿಕ್ಷಣ ದಾನ ಮಾಡುತ್ತಿದ್ದಾರೆ. ಎಚ್ಐವಿ ಸೋಂಕು ಪೀಡಿತ ಜನರನ್ನು ಕೂಡ ಸಲಹುತ್ತಿದ್ದಾರೆ. ಬಡವರಿಗಾಗಿ ಮನೆ ನಿರ್ಮಾಣ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದಾರೆ.

ಸ್ವಾದಿಷ್ಟ ಭೋಜನದ ಮಳಿಗೆ

ಸ್ವಾದಿಷ್ಟ ಭೋಜನದ ಮಳಿಗೆ

ಆಟ, ಮನರಂಜನೆಯ ಜೊತೆಗೆ ಸೇಂಟ್ ಜೋಸೆಫ್ ಮೈದಾನದಲ್ಲಿ ಅನೇಕ ಫುಡ್ ಜಾಯಿಂಟ್ ಗಳು ಕೂಡ ತೆರೆದುಕೊಂಡಿದ್ದವು. ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳು ಹಸಿದವರ ಹಸಿವನ್ನು ತಣಿಸುತ್ತಿದ್ದವು.

ಕಾಟಿ ಜೋನ್ ನಲ್ಲಿ ಸ್ವಾದಿಷ್ಟ ಖಾದ್ಯ

ಕಾಟಿ ಜೋನ್ ನಲ್ಲಿ ಸ್ವಾದಿಷ್ಟ ಖಾದ್ಯ

ಕಾಟಿ ಜೋನ್ ನಲ್ಲಿ ಅಂತಹ ಭರ್ಜರಿ ವ್ಯಾಪಾರ ನಡೆಯುತ್ತಿದ್ದುದು ಕಂಡುಬರಲಿಲ್ಲ.

ಸ್ವಸಹಾಯ ಸಂಘಟನೆಯ ಮಹಿಳಾಮಣಿಗಳು

ಸ್ವಸಹಾಯ ಸಂಘಟನೆಯ ಮಹಿಳಾಮಣಿಗಳು

ಸ್ವಸಹಾಯ ಪದ್ಧತಿಯ ಮುಖಾಂತರ ಸ್ವತಂತ್ರವಾಗಿ ಬದುಕು ಸಾಗಿಸುತ್ತಿರುವ ಮಹಿಳೆಯರು ದಂಡುದಂಡಾಗಿ ಜೆನರಾಸಿಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರಲ್ಲಿ ಮನೆಗೆಲಸ ಮಾಡುವ ಹಲವಾರು ಮಹಿಳೆಯರು ಕೂಡ ಸೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+