GBA: ವಾರ್ಡ್ ವಿಂಗಡಣೆ ವರದಿ ಸಲ್ಲಿಕೆ: ಜಾರಿಗೆ ಒಪ್ಪಿದ ಸರ್ಕಾರದಿಂದ ಆಕ್ಷೇಪಣೆ ಆಹ್ವಾನ
ಬೆಂಗಳೂರು, ಸೆಪ್ಟಂಬರ್ 30: ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನ್ನು ಐದು ನಗರ ಪಾಲಿಕೆಗಳ ವಿಂಗಡಿಸಿತ್ತು. ಇದರ ಕರಡು ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆ ಪ್ರಕಟಿಸಿದೆ. ಅಲ್ಲದೇ ವಾರ್ಡ್ ಪುನರ್ ವಿಂಗಡನೆಗೆ ರಚಿಸಿದ್ದ ಆಯೋಗವು ಇಂದು ಮಂಗಳವಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿ ಜಾರಿಗೆ ಸರ್ಕಾರ ಒಪ್ಪಿದೆ. ನಾಗರಿಕರಿಂದ ಏನಾದರೂ ಆಕ್ಷೇಪಣೆಗಳು ಹಾಗೂ ಸಲಹೆಗಳು ಇದ್ದಲ್ಲಿ ಸಲ್ಲಿಸುವಂತೆ ಸರ್ಕಾರ ಕೋರಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ 100 ಬಿಬಿಎಸ್ 2025(ಭಾಗ-2), 14-05-2025 ರಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024 ಅನ್ನು ಸರ್ಕಾರವು 15-05-2025 ರಿಂದ ಜಾರಿಗೆ ತಂದಿದೆ. ಸರ್ಕಾರದ ಅಧಿಸೂಚನೆ ಅನ್ವಯ ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ನೂತನವಾಗಿ ಐದು ನಗರ ಪಾಲಿಕೆ ಸ್ಥಾಪಿಸಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳೆಂದು ವಿಂಗಡಿಸಿದೆ. ಸದರಿ ಕಾಯ್ದೆಯ ಪ್ರಕರಣ 29ರ ಉಪ ಪ್ರಕರಣ (1) ಮತ್ತು (3) ಗಳನ್ವಯ ವಾರ್ಡ್‌ಗಳ ಪುನರ್ ವಿಂಗಡಣೆಗಾಗಿ 03 ತಿಂಗಳ ಅವಧಿಗೆ ಸೀಮಿತವಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗ ರಚಿಸಲಾಗಿದೆ.
ಸರ್ಕಾರದ ಆದೇಶನ್ವಯ ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಬೆಂಗಳೂರು ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ವಾರ್ಡ್‌ಗಳ ಪುನರ್‌ವಿಂಗಡಣೆ ಮಾಡಲು ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಅದರಂತೆ, ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗವು ದಿನಾಂಕ 30-09-2025ರಂದು ಸರ್ಕಾರಕ್ಕೆ ವಾರ್ಡ್‌ಗಳ ಪುನರ್ ವಿಂಗಡಣಾ ವರದಿಯನ್ನು ಸಲ್ಲಿಸಿದೆ.
ಸರ್ಕಾರ ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗದ ವರದಿಯನ್ನು ಒಪ್ಪಿದೆ. ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಪ್ರಕರಣ 29ರಲ್ಲಿ ಪ್ರದತ್ತವಾದ ಅಧಿಕಾರದನ್ವಯ, 2011ರ ಜನಗಣತಿಯ ಆಧಾರದ ಮೇರೆಗೆ, ಗ್ರೇಟರ್ ಬೆಂಗಳೂರು ಪ್ರದೇಶದ 05 ನಗರ ಪಾಲಿಕೆಗಳ ಕರಡು ವಾರ್ಡ್‌ಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಈ ಕೆಳಕಂಡಂತೆ ನಿಗದಿಪಡಿಸಿ, ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳು ಆಕ್ಷೇಪಣೆಗಳು ಇದ್ದರೆ, ಸಲಹೆ ಇದ್ದರೆ ಸಲ್ಲಿಸಬಹುದು.
5 ನಗರ ಪಾಲಿಕೆಗಳಿಗೆ ಕರಡು ವಾರ್ಡ್ ಗಳ ಸಂಖ್ಯೆ ಹೀಗಿದೆ
* ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 63
* ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 72
* ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 50
* ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 111
* ಬೆಂಗಳೂರು ಉತ್ತರ ನಗರ ಪಾಲಿಕೆಯ ವಾರ್ಡ್ ಗಳ ಸಂಖ್ಯೆ: 72
ಆಕ್ಷೇಪಣೆ ಸಲ್ಲಿಕೆ ಹೇಗೆ?
ಈ ಬಗ್ಗೆ ಯಾವುದೇ ಆಕ್ಷೇಪಣೆ / ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ-ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ / ಸಲಹೆಗಳನ್ನು ಸಲ್ಲಿಸಬೇಕು. ರಾಜ್ಯದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್ ಅಂಬೇಡ್ಕರ್ ವೀದಿ, ಬೆಂಗಳೂರು-560001. ಇವರಿಗೆ ದಿನಾಂಕ:15-10-2025 ರಂದು ಅಪರಾಹ್ನ 5.00 ಗಂಟೆಯ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications