E-Khata: ಬೆಂಗಳೂರು ಅಪಾರ್ಟ್ಮೆಂಟ್‌ಗಳಲ್ಲಿ ಇ-ಖಾತಾ ಅಭಿಯಾನ: ಜಿಬಿಎ ಗುಡ್‌ನ್ಯೂಸ್
ಬೆಂಗಳೂರು: ರಾಜ್ಯ ಸರ್ಕಾರ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಆಸ್ತಿ ತೆರಿಗೆ ಪಾವತಿ, ವಹಿವಾಟುಗಳನ್ನು ಆನ್‌ಲೈನ್‌ನಲ್ಲಿ ಸುಗಮಗೊಳಿಸುವ ಉದ್ದೇಶದಿಂದ ಇ-ಖಾತಾ ಅಭಿಯಾನ ಆರಂಭಿಸಿದೆ. ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ಇ-ಖಾತಾ ಅಭಿಯಾನ ಹಮ್ಮಿಕೊಂಡಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇದೀಗ ನಗರದ ಅಪಾರ್ಟ್ಮೆಂರ್ಟ್ ಪ್ರದೇಶಗಳಲ್ಲಿ ಸಹ ಅಭಿಯಾನ ಹಮ್ಮಿಕೊಳ್ಳಲು ಮುಂದಾಗಿದೆ.
ಇಂದು ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಯಲಹಂಕದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಬೃಹತ್ ವಸತಿ ಸಮುಚ್ಚಯಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಇ-ಖಾತಾ ಕುರಿತು ಚರ್ಚಿಸಿದರು. ಅಗತ್ಯ ದಾಖಲೆಗಳನ್ನೊಳಗೊಂಡ ಕನಿಷ್ಠ 100 ಅರ್ಜಿಗಳು ಸಿದ್ಧವಿರುವ ಬೃಹತ್ ವಸತಿ ಸಮುಚ್ಚಯ ಕಟ್ಟಡಗಳಲ್ಲಿ ಇ-ಖಾತಾ ಮೇಳ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ವಸತಿ ಸಮುಚ್ಛಯಗಳ ಪ್ರತಿನಿಧಿಗಳೊಂದಿಗೆ ಬೇಡಿಕೆ ಸ್ವೀಕರಿಸಲಾಯಿತು. ಅವರು ಇ-ಖಾತಾ ಅಭಿಯಾನ ಬಗ್ಗೆ ಆಯುಕ್ತರ ಬಳಿ ಕೋರಿದರು. ಆಗ ಆಯುಕ್ತರು ಪ್ರತಿಕ್ರಿಯಿಸಿ, ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳಲ್ಲಿನ ಬೃಹತ್ ವಸತಿ ಸಮುಚ್ಚಯ ಕಟ್ಟಡ ಪ್ರದೇಶಗಳಲ್ಲಿ ಈ ಇ-ಖಾತಾ ಅಭಿಯಾನ ನಡೆಸಲಾಗುವುದು. ಅಗತ್ಯ ದಾಖಲೆಗಳಿರುವ ಕನಿಷ್ಠ 100 ಅರ್ಜಿಗಳು ಇಲ್ಲಿಬೇಕಿದ್ದು, ಅಲ್ಲಿನ ಮಾಲೀಕರಿಗೆ ಇ-ಖಾತಾ ವಿತರಿಸಲಾಗುವುದು ಎಂದು ಹೇಳಿದರು.
ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳಲ್ಲಿನ ಅಪಾರ್ಟ್‌ಮೆಂಟ್ ಕಟ್ಟಡಗಳ ಸಂಘದ ಪದಾಧಿಕಾರಿಗಳು ಮನೆಯ ಮಾಲೀಕರೊಂದಿಗೆ ಸಮನ್ವಯ ಸಾಧಿಸಲಾಗಿದೆ. ಇ-ಖಾತಾಗಳ ವಿತರಣೆಗೆ ಅಧಿಕಾರಿಗಳು, ಸಿಬ್ಬಂದಿ ಚರ್ಚಿಸಲಾಗಿದೆ. ಅದರಂತೆ ದಿನಾಂಕ ನಿಗದಿಪಡಿಸಿದ ಕೂಡಲೇ ಇ-ಖಾತಾ ಮೇಳವನ್ನು ಶೀಘ್ರವೇ ಆಯೋಜನೆ ಮಾಡಿ ಖಾತೆಗಳ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇ-ಖಾತಾ ಪಡೆಯಲು ಬೇಕಾಗಿರುವ ದಾಖಲೆಗಳು
* ಕ್ರಯ ಪತ್ರ / ದಾನ ಪತ್ರ
* ಈವರೆಗೆ ಕಂದಾಯ ಪಾವತಿಸಿದ ರಸಿದಿಗಳು
* ಬೆಸ್ಕಾಂ ಮೀಟರ್ ಬಿಲ್
* ಆಸ್ತಿಯ ಮಾಲೀಕತ್ವ ಪಡೆದಿರುವ ಹಿಂದಿನ ಖಾತಾ ದಾಖಲೆ
* ಮನೆಯ ಜಿಪಿಎಸ್ ಫೋಟೋ
* ಆಧಾರ್ ಕಾರ್ಡ್
ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಈ ತಂತ್ರಾಂಶದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಅಭಿಯಾನಗಳ ಮೂಲಕ ಇನ್ನಷ್ಟು ಇ-ಖಾತಾ ವಿತರಣೆ ಸಾಧ್ಯವಾಗಲಿದೆ. ಮತ್ತೊಂದೆಡೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವತಿಯಿಂದ ಬಿ-ಖಾತಾದಿಂದ ಎ-ಖಾತಾಗೆ ದಾಖಲೆಗಳ ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದ ನಕಲಿ ಆಸ್ತಿ ದಾಖಲೆ ವಹಿವಾಟು ತಡೆಗಟ್ಟಲಾಗುತ್ತಿದೆ. ಜೊತೆಗೆ ಆಸ್ತಿ ಮಾಲೀಕರಿಗೆ ಮಧ್ಯವರ್ತಿಗಳಿಲ್ಲದೆ ಸರಳವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುವ ಉದ್ದೇಶ ಜಿಬಿಎ ಹೊಂದಿದೆ. ಬೆಂಗಳೂರಿಗೆ ಮಾತ್ರವೇ ಸಿಮೀತವಾಗದೇ ಈ ಇ-ಖಾತಾ ವಿತರಣೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಲಾಗಿದೆ.












Click it and Unblock the Notifications