ಬೆಂಗಳೂರಿನ ಅಪಾರ್ಟ್ಮೆಂಟ್, ಪಿಜಿಗಳಿಗೆ ಜಿಬಿಎ ಮಹತ್ವದ ಸೂಚನೆ: ಉಲ್ಲಂಘಿಸಿದರೆ ದಂಡ, ಕಾನೂನು ಕ್ರಮ
ಬೆಂಗಳೂರು: ಬೆಂಗಳೂರಿನ ಸರ್ವೀಸ್ ಅಪಾರ್ಟ್ಮೆಂಟ್, ಹಾಸ್ಟಲ್ ಹಾಗೂ ಪಿಜಿಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಹತ್ವದ ಸೂಚನೆ ನೀಡಲಾಗಿದೆ. ಜಿಬಿಎ ಪ್ರಮುಖ ಪಾಲಿಕೆಯಿಂದ ಈ ಸಂಬಂಧ ಮಹತ್ವದ ಆದೇಶ ಮಾಡಲಾಗಿದೆ. ಇದರ ವಿವರ ನೋಡೋಣ.
ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ವೀಸ್ ಅಪಾರ್ಟ್ಮೆಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳ ಮಾಲೀಕರು/ ನಿರ್ವಾಹಕರು ಅಥವಾ ವ್ಯವಸ್ಥಾಪಕರು, ನಗರ ಪಾಲಿಕೆಯ ವತಿಯಿಂದ ಸೂಚಿಸಲಾದ ಹಾಗೂ ಈ ನಿಯಮಗಳಿಗೆ ಮಾತ್ರ ಸೀಮಿತವಾಗದೇ ಅನ್ವಯವಾಗುವ ಎಲ್ಲಾ ಸುರಕ್ಷತಾ ನಿಯಮಗಳನ್ನು ನಿಗದಿತ ಅವಧಿಯೊಳಗೆ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಕೈಗೊಂಡು ಕಟ್ಟುನಿಟ್ಟಾಗಿ ಅನುಸರಿಸುವಂತೆ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಈಚೆಗೆ ಬೆಂಗಳೂರಿನಲ್ಲಿ ಸಂಭವಿಸಿರುವ ಅನಿಲ ಸ್ಫೋಟ ಹಾಗೂ ಅಗ್ನಿ ಅವಘಡಗಳಂತಹ ದುರಂತಗಳು ಮತ್ತೆ ಸಂಭವಿಸದಂತೆ ತಡೆಯುವುದು ಮತ್ತು ಸಾರ್ವಜನಿಕರ ಜೀವ ಹಾಗೂ ಆಸ್ತಿ ಸುರಕ್ಷತೆಯನ್ನು ಖಚಿತಪಡಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಎಲ್ಲಾ ಸಂಸ್ಥೆಗಳು ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿರುವುದನ್ನು ಮಾಲೀಕರು/ನಿರ್ವಾಹಕರು/ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳಬೇಕು ಎಂದೂ ಇದೇ ಸಂದರ್ಭದಲ್ಲಿ ತಿಳಿಸಲಾಗಿದೆ.
ಪಾಲಿಸಬೇಕಾದ ಪ್ರಮುಖ ಸುರಕ್ಷತಾ ನಿಯಮಗಳು:
1. ಎಲ್.ಪಿ.ಜಿ./ಅನಿಲ ಸಂಪರ್ಕಗಳ ಸುರಕ್ಷಿತ ಹಾಗೂ ಅಧಿಕೃತ ಬಳಕೆ
2. ಅಕ್ರಮ ಹಾಗೂ ಅಸುರಕ್ಷಿತ ಅನಿಲ ಸಿಲಿಂಡರ್‌ಗಳ ಸಂಪೂರ್ಣ ನಿಷೇಧ
3. ಸಮರ್ಪಕ ಗಾಳಿ ಮತ್ತು ಅಗ್ನಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.
4. ವಿದ್ಯುತ್ ಸುರಕ್ಷತೆ ಹಾಗೂ ಓವರ್‌ಲೋಡ್ ತಪ್ಪಿಸುವ ಕ್ರಮಗ
5. ಅಸ್ತಿತ್ವದಲ್ಲಿರುವ ವ್ಯಾಪಾರ ಪರವಾನಗಿ ಮತ್ತು ಅಗತ್ಯ ನೋಂದಣಿಗಳು
ಇನ್ನು ಈ ಎಲ್ಲಾ ಸುರಕ್ಷತಾ ಕೊರತೆಗಳನ್ನು ಸರಿಪಡಿಸಿ, ಅನ್ವಯವಾಗುವ ಎಲ್ಲಾ ಕಾನೂನುಗಳು ಹಾಗೂ ಪರವಾನಗಿ ಷರತ್ತುಗಳ ಸಂಪೂರ್ಣ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸರ್ವೀಸ್ ಅಪಾರ್ಟ್ಮೆಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳಿಗೆ ಏಳು ದಿನಗಳ ಕಾಲಾವಕಾಶವನ್ನು ಕೊಡಲಾಗಿದೆ. ನಿಗದಿತ ಕಾಲಾವಕಾಶ ಮುಗಿದ ನಂತರ ನಗರ ಪಾಲಿಕೆ ವತಿಯಿಂದ ವಿಶೇಷ ತಪಾಸಣಾ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷತಾ ನಿಯಮಗಳನ್ನು ಪಾಲಿಸಲು ವಿಫಲವಾದ ಸರ್ವೀಸ್ ಅಪಾರ್ಟ್ಮೆಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅವುಗಳನ್ನು ಸೀಲಿಂಗ್ ಮಾಡುವುದರ ಜೊತೆಗೆ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸುವುದು ಅಥವಾ ಅಮಾನತು ಮಾಡಲಾಗುವುದು. ಅಲ್ಲದೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ-2024 ಹಾಗೂ ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ದಂಡ ವಿಧಿಸಲಾಗುವುದು.
ಉಲ್ಲಂಘನೆಗಳು ಜೀವ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡಿದಲ್ಲಿ ಸಂಬಂಧಿತ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಲಾಗಿದೆ.
ಇನ್ನು ಈ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಚ್ಚರಿಕೆ ನೀಡಿದೆ.












Click it and Unblock the Notifications