ಬೆಂಗಳೂರಿನಲ್ಲಿ ರಸ್ತೆ ಅಗೆಯಲು MARCS ಪೋರ್ಟಲ್ ಪರಿಚಯಿಸಿದ ಜಿಬಿಎ
ಬೆಂಗಳೂರು: ಬೆಂಗಳೂರಿನಲ್ಲಿ ಬೇಕಾಬಿಟ್ಟಿ ರಸ್ತೆ ಅಗೆಯುವುದಕ್ಕೆ ಬ್ರೇಕ್ ಹಾಕುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಬೆಂಗಳೂರಿನ ದಕ್ಷಿಣ ನಗರ ಪಾಲಿಕೆಯ ಸಮಗ್ರ ಅಭಿವೃದ್ಧಿಗೆ ಇತರ ಇಲಾಖೆಗಳು ಕೈಜೋಡಿಸಬೇಕು ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಹೇಳಿದ್ದಾರೆ. ನಗರದ ಮೂಲಸೌಕರ್ಯ ಯೋಜನೆಗಳು ಮತ್ತು ಸಂಚಾರ ದಟ್ಟಣೆ ನಿರ್ವಹಣೆಯಲ್ಲಿ ವಿವಿಧ ಇಲಾಖೆಗಳ ನಡುವೆ ಹೆಚ್ಚಿನ ಸಮನ್ವಯ ಸಾಧಿಸಲು ನಗರ ಪಾಲಿಕೆ, ಗೇಲ್ (GAIL), ಸಂಚಾರ ಪೊಲೀಸ್, ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಜಲಮಂಡಳಿ (BWSSB) ಉನ್ನತ ಅಧಿಕಾರಿಗಳ ಜಂಟಿ ಸಮನ್ವಯ ಸಭೆಯನ್ನು ನಡೆಸಲಾಗಿದೆ. ಈ ಸಭೆಯಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆ ಕತ್ತರಿಸುವಿಕೆ ಮತ್ತು ಇತರ ಸೇವೆಗಳಿಗಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾದ 'MARCS' ಪೋರ್ಟಲ್ ಮೂಲಕವೇ ಈ ಹಿಂದಿನ ತಂತ್ರಜ್ಞಾನದಲ್ಲಿ ಅರ್ಜಿ ಸಲ್ಲಿಸಿದ್ದರೂ ಸಹ ಹೊಸ ಅರ್ಜಿಗಳನ್ನು ಸಲ್ಲಿಸಬೇಕು. ಪ್ರಸ್ತುತ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷಗಳು ಇದ್ದರೆ ಶೀಘ್ರವಾಗಿ ಸರಿಪಡಿಸಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.

RIMS ತಂತ್ರಜ್ಞಾನ ಅನುಷ್ಠಾನ: ರಸ್ತೆಗಳ ಸಂಪೂರ್ಣ ವಿವರಗಳನ್ನು ಪಡೆಯಲು 'ರಸ್ತೆ ಮಾಹಿತಿ ನಿರ್ವಹಣಾ ವ್ಯವಸ್ಥೆ' (Road Information Management System - RIMS) ಸಾಫ್ಟ್‌ವೇರ್ ಅನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದೆಂದು ಆಯುಕ್ತರು ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಸೂಚನೆಯಂತೆ ಇಬ್ಲೂರು ಜಂಕ್ಷನ್ ಅಭಿವೃದ್ಧಿಗಾಗಿ ಯೋಜನೆ, ಅಂಡರ್ ಪಾಸ್ ಮತ್ತು ಫ್ಲೈಓವರ್ ನಿರ್ಮಾಣದ ಎರಡು ಪ್ರಸ್ತಾಪಗಳಿವೆ. ಈ ಪ್ರದೇಶದಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಯೋಜನೆಗಳು ಇದ್ದಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ.
ಇಲ್ಲಿ ಗೇಲ್ (GAIL) ಸಂಸ್ಥೆಯು 8 ಇಂಚಿನ ಮಧ್ಯಮ ಒತ್ತಡದ ಪೈಪ್ ಲೈನ್ ಅಳವಡಿಸಿರುವುದಾಗಿ ತಿಳಿಸಿದ್ದ ಮೇರೆಗೆ ಆಯುಕ್ತರು ಎಲ್ಲಾ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಿ ಯೋಜನೆ ಸಾಧ್ಯತೆಯ ಬಗ್ಗೆ ವರದಿ ನೀಡಲು ಆಯುಕ್ತರು ಸೂಚನೆ ಸೂಚಿಸಿದ್ದಾರೆ. ಬೆಂಗಳೂರು ಪೂರ್ವ ವಲಯ ಪಾಲಿಕೆಯ ಅಧಿಕಾರಿಗಳೊಡನೆ ಜಂಟಿ ಪರಿಶೀಲನೆ ನಡೆಸಿ, ವಿಪ್ರೋ ಜಂಕ್ಷನ್ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಯು-ಟರ್ನ್ ಅಭಿವೃದ್ಧಿಪಡಿಸಲು ಮತ್ತು ಬಸ್ ತಂಗುದಾಣಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
ಎಲಿಮೆಂಟ್ಸ್ ಅಪಾರ್ಟ್‌ಮೆಂಟ್ ಬಳಿ ಕಾಂಪೌಂಡ್ ಗೋಡೆ ತೆರವುಗೊಳಿಸಿ ಸಣ್ಣ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದು ಮತ್ತು ಈ ಜಾಗದಲ್ಲಿನ ಖಾಲಿ ಪ್ರದೇಶದಲ್ಲಿ ಬಸ್ ಬೇ ನಿರ್ಮಿಸಲು ಚರ್ಚಿಸಲಾಯಿತು.
ಬನ್ನೇರುಘಟ್ಟ ರಸ್ತೆ: ಫೋರ್ಟಿಸ್ ಆಸ್ಪತ್ರೆ ಬಳಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲು ಜಲಮಂಡಳಿಗೆ ಸೂಚಿಸಲಾಯಿತು. ಸದ್ಯ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ರಸ್ತೆ ಮರುಸ್ಥಾಪನೆ ಸರಿಯಾಗಿ ಆಗದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ತಕ್ಷಣ ರಸ್ತೆ ದುರಸ್ತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಂಚಾರ ಪೊಲೀಸ್ ಇಲಾಖೆಯ ಶಿಫಾರಸುಗಳು
ಇಬ್ಬಲೂರಿನ ಮಣಿಪಾಲ್ ಕೌಂಟಿ ಬಳಿ ಚರಂಡಿ ನಿರ್ಮಾಣ ಮತ್ತು ಅಗರ ಕೆರೆ ಬಳಿಯ ಸರ್ವಿಸ್ ರಸ್ತೆ ಮತ್ತು ಮುಖ್ಯ ರಸ್ತೆ ನಡುವೆ ನೀರಿನ ಹರಿವಿನ ಸಮಸ್ಯೆ ನಿವಾರಿಸಲು ಕ್ರಮ. ಅಗರದಿಂದ ಆನೆಪಾಳ್ಯದವರೆಗೆ ಅಪಘಾತ ವಲಯಗಳಲ್ಲಿ ಮೀಡಿಯನ್ ಎತ್ತರ ಹೆಚ್ಚಿಸುವುದು, ಕಸವನಹಳ್ಳಿ ರಸ್ತೆಯಲ್ಲಿ ಮೀಡಿಯನ್ ಅಳವಡಿಕೆ, ಜಿಬ್ರಾ ಕ್ರಾಸಿಂಗ್, ಸ್ಟಾಪ್ ಲೈನ್ ಮತ್ತು ಸಿಗ್ನಲ್ ಮಾಹಿತಿ ಫಲಕಗಳನ್ನು ಅಳವಡಿಸಲು ಕ್ರಮ. ಸಿಲ್ಕ್ ಬೋರ್ಡ್ ಜಂಕ್ಷನ್, ಇಬ್ಲೂರು ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಮತ್ತು ಬನ್ನೇರುಘಟ್ಟ ರಸ್ತೆಯ ರಾಜಕಾಲುವೆಗಳಲ್ಲಿ ತಕ್ಷಣ ಹೂಳೆತ್ತಲು ಸೂಚಿಸಲಾಯಿತು. ಟ್ರಾಫಿಕ್ ಪೊಲೀಸ್ ನಿಂದ ನೀಡಲಾಗಿರುವ ಶಿಫಾರಸ್ಸುಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಪಾಲಿಕೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರತಿ ಉಪವಿಭಾಗ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಪಡೆ (Task Force) ರಚಿಸುವುದು ಅತ್ಯಗತ್ಯ. ತಳಮಟ್ಟದ ಅಧಿಕಾರಿಗಳಿಂದ ಸಮನ್ವಯ ಉಂಟಾದಲ್ಲಿ ಸಮಸ್ಯೆಗಳಿಗೆ ಪರಿಹಾರ ಸುಲಭವಾಗುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ತ್ವರಿತ ಸಂವಹನಕ್ಕಾಗಿ ವಾಟ್ಸಾಪ್ ಗ್ರೂಪ್ ರಚಿಸಲು ಸೂಚಿಸಿದ್ದಾರೆ.












Click it and Unblock the Notifications