Gandhi Bazar: ಗಾಂಧಿಬಜಾರ್ ಪಾದಾಚಾರಿಗಳಿಗೆ ಗುಡ್‌ನ್ಯೂಸ್, ಒತ್ತುವರಿದಾರರಿಗೆ GBA ಶಾಕ್
ಬೆಂಗಳೂರು, ಡಿಸೆಂಬರ್ 03: ಬೆಂಗಳೂರು ನಗರದಲ್ಲಿ ಹಿಂದಿನಿಂದಲೂ ಒತ್ತುವರಿದಾರರಿಂದ ಸಮಸ್ಯೆ ಆಗುತ್ತಿದೆ. ಮಳೆ ಬಂದಾಗಲೇ ಒತ್ತುವರಿಯಿಂದ ಎಷ್ಟೆಲ್ಲ ಸಮಸ್ಯೆ ಆಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ರಾಜಕಾಲುವೆ, ರಸ್ತೆ, ಕೆರೆ ಜೊತೆಗೆ ಪಾದಾಚಾರಿ ಒತ್ತುವರಿ ತೆರವಿನ ಮುಂದುವರಿದ ಕಾರ್ಯವು ಇಂದು ಬುಧವಾರ ನಗರದ ಗಾಂಧಿಬಜಾರ್‌ನಲ್ಲಿ ನಡೆಯಿತು. ಈ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪಾದಾಚಾರಿಗಳಿಗೆ ಗುಡ್‌ನ್ಯೂಸ್, ಒತ್ತುವರಿದಾರರಿಗೆ ಶಾಕ್ ನೀಡಿದೆ.
ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೊಳನ್ ಅವರು ಇಂದು (ಡಿಸೆಂಬರ್ 03) ಚಿಕ್ಕಪೇಟೆ ವಿಭಾಗದ ಗಾಂಧಿಬಜಾರ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ವಿಭಾಗದ ಗಾಂಧಿ ಬಜಾರ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಆಯುಕ್ತರು ಸೂಚನೆ ನೀಡಿರುವ ಹಿನ್ನೆಲೆ ಚಿಕ್ಕಪೇಟೆ ಕಾರ್ಯಪಾಲಕ ಅಭಿಯಂತರರಾದ ಪ್ರದೀಪ್ ಕುಮಾರ್ ನೇತೃತ್ವದ ತಂಡವು ಒತ್ತುವರಿಯನ್ನು ತೆರವುಗೊಳಿಸಿತು.

ವ್ಯಾಪಾರಕ್ಕೆ 120 ಮಳಿಗೆಗಳ ಸ್ಥಳ ಗುರುತು
ಗಾಂಧಿ ಬಜಾರ್ ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸುಮಾರು 120 ಮಳಿಗೆಗಳಿಗೆ ಸ್ಥಳ ಗುರುತಿಸಿ ಆ ಸ್ಥಳದಲ್ಲಿಯೇ ವ್ಯಾಪಾರ ಮಾಡಲು ಸೂಚಿಸಲಾಯಿತು. ಆದರೆ ನಿಗದಿಪಡಿಸಿರುವ ಸ್ಥಳ ಬಿಟ್ಟು ಹೆಚ್ಚುವರಿ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದು, ಇದರಿಂದ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಹೀಗಾಗಿ ಅವರಿಗೆ ಒತ್ತುವರಿ ತೆರವುಗೊಳಿಸಲು ಸಾಕಷ್ಟು ಬಾರಿ ತಿಳಿಸಲಾಯಿತು. ಆದರೂ ಅವರು ತಲೆಕೆಡಿಸಿಕೊಳ್ಳದ ಹಿನ್ನೆಲೆ ಪಾಲಿಕೆ ಸಿಬ್ಬಂದಿಯಿಂದ ಪಾದಚಾರಿ ಮಾರ್ಗ ತೆರವು ಮಾಡಲಾಯಿತು.
ತೆರವು ಕಾರ್ಯಾಚರಣೆಯ ವೇಳೆ 2 ಜೆಸಿಬಿ, 7ಟ್ರ್ಯಾಕ್ಟರ್ ಗಳು, 3ಲಾರಿಗಳು ಹಾಗೂ 40 ಸಿಬ್ಬಂದಿಗಳನ್ನು ಬಳಸಿಕೊಂಡು, ನಿಗದಿಪಡಿಸಿರುವ ಜಾಗಕ್ಕಿಂತ ಹೆಚ್ಚುವರಿ ಜಾಗ ಒತ್ತುವರಿ ಮಾಡಿಕೊಂಡಿದ್ದ ಜಾಗ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ 5 ಶಾಪ್ ಗಳನ್ನು ತೆರವುಗೊಳಿಸಲಾಗಿದೆ.
ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಗೆ ನಿಗದಿಪಡಿಸಿರುವ ಜಾಗದಲ್ಲಿಯೇ ವ್ಯಾಪಾರ ಮಾಡಬೇಕು. ಅದನ್ನು ಹೊರತುಪಡಿಸಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಬೆಳಬೆಳಗ್ಗೆಯೇ ಪಾಲಿಕೆ ವತಿಯಿಂದ ಜಿಸಿಬಿಗಳು ಗಾಂಧಿಬಜಾರ್ ನಲ್ಲಿ ಘರ್ಜಿಸಿವೆ. ತೆರವುಗೊಳಿಸಿದ ತ್ಯಾಜ್ಯ ವಸ್ತುಗಳನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಿ ಬೇರೆಡೆ ವಿಲೇವಾರಿ ಮಾಡಲಾಯಿತು. ಕೆಲವೆಡೆ ಅಂಗಡಿ ಮುಂಗಟ್ಟು ಮಾಲೀಕರು, ಸಿಬ್ಬಂದಿ ಮಧ್ಯ ವಾಗ್ವಾದ ನಡೆಯಿತು. ಬಳಿಕ ಅಧಿಕಾರಿಗಳ ಸೂಚನೆ ಮೇರೆಗೆ ತೆರವುಗೊಳಿಸಲಾಯಿತು. ಇನ್ನು ಮುಂದೆ ಮತ್ತೆ ಈ ರೀತಿ ಒತ್ತುವರಿ ಆಗದಂತೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications