ಜಾತಿ ಗಣತಿಗೆ ಬಾರದ ಅಧಿಕಾರಿಗಳ ವೇತನ ಕಟ್, ಅಮಾನತು ಶಿಕ್ಷೆ...GBA
ಬೆಂಗಳೂರು: ಅಕ್ಟೋಬರ್ 14: ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Socio-Educational Survey) ನಡೆಯುತ್ತಿದೆ. ಇದಕ್ಕಾಗಿ ಸರ್ಕಾರಿ ಅಧಿಕಾರಿಗಳನ್ನು ಸಮೀಕ್ಷೆದಾರರಾಗಿ ನೇಮಕಾತಿ ಮಾಡಲಾಗಿದೆ. ಸರ್ಕಾರದ ಸೂಚನೆ ಮೇರೆಗೂ ಸಮೀಕ್ಷೆಗೆ ಬಾರದ ಅಧಿಕಾರಿಗಳ ವಿರುದ್ಧ ಇದೀಗ ಸೂಕ್ತ ಕ್ರಮ ಜರುಗಿಸಲಾಗಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಸುಮಾರು 46 ಲಕ್ಷ ಮನೆಮನೆಗಳಿಗೆ ಸಮೀಕ್ಷೆ ನಡೆಸಬೇಕಿದೆ. ಇದಕ್ಕಾಗಿ ಸುಮಾರು 21,000 ಸಮೀಕ್ಷಾದಾರ(Enumerators)ರನ್ನು ನಿಯೋಜಿಸಲಾಗಿದೆ. ಈ ಸಮೀಕ್ಷಾದಾರಲ್ಲಿ 18,000 ಕ್ಕೂ ಹೆಚ್ಚು ಮಂದಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರು ಸರ್ಕಾರದಿಂದ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಅರ್ಹರಾಗಿದ್ದಾರೆ.

ಇನ್ನೂ ಸಮೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳ ಪೈಕಿ ಗರ್ಭಿಣಿಯರು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವುಳ್ಳ ತಾಯಂದಿರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಯುಳ್ಳ ಸಮೀಕ್ಷಾದಾರರನ್ನು ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಆದರೆ, ಪ್ರತಿದಿನ ಪದೇ ಪದೇ ನೋಟೀಸ್ ಗಳು ಹಾಗೂ SMS ಮೂಲಕ ಸಂದೇಶಗಳನ್ನು ನೀಡುತ್ತಿದ್ದರೂ ಸಹ ಸುಮಾರು 2,300 ಸಮೀಕ್ಷದಾರರು ಯಾವುದೇ ಕಾರಣವಿಲ್ಲದೆ ಹಾಗೂ ಅನಧಿಕೃತವಾಗಿ ಗೈರುಹಾಜರಿದ್ದಾರೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತಿಳಿಸಿದೆ.
ಇಂತಹವರ ನಡೆ ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಅವರ ಅನಧಿಕೃತ ಗೈರುಹಾಜರಿ ಅವಧಿಯ ವೇತನವನ್ನು "ಕೆಲಸ ಮಾಡದಿದ್ದರೆ ವೇತನವಿಲ್ಲ(No Work - No Pay)' ತತ್ವದ ಪ್ರಕಾರ ನಿರಾಕರಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಮೀಕ್ಷೆಗೆ ಗೈರಾದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ.
ಅವರು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ, ತಮಗೆ ಹಂಚಿಕೆಯಾಗಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ, ಅನಧಿಕೃತವಾಗಿ ಗೈರಾಗಿರುವ ಸಮೀಕ್ಷಾದಾರರ ವಿರುದ್ಧ ಪ್ರತಿದಿನ ಕ್ರಮ ಕೈಗೊಳ್ಳಲಾಗುತ್ತದೆ ಅಂತಲೂ ಎಚ್ಚರಿಕೆ ನೀಡಿದ್ದಾರೆ. ಸಲ್ಲದೇ ಅನಧಿಕೃತವಾಗಿ ಗೈರುಹಾಜರಾಗುವುದನ್ನು ಮುಂದುವರಿಸಿದರೆ ಅಮಾನತು ಸೇರಿದಂತೆ ಶಿಸ್ತು ಕ್ರಮಕ್ಕೆ ಸಹ ಅವರು ಹೊಣೆಗಾರರಾಗಿರುತ್ತಾರೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಎಚ್ಚರಿಸಿದ್ದಾರೆ.












Click it and Unblock the Notifications