ಸಂಸ ಬಯಲು ರಂಗಮಂದಿರದಲ್ಲಿ ಗೌರಿ ಲಂಕೇಶ್ ಅಂತಿಮ ದರ್ಶನ
Recommended Video

ಬೆಂಗಳೂರು, ಸೆಪ್ಟೆಂಬರ್ 06 : ದುಷ್ಕರ್ಮಿಗಳಿಂದ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅಂತ್ಯಕ್ರಿಯೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ. ಮರಣೋತ್ತರ ಪರೀಕ್ಷೆ ಬಳಿಕ ದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ.
ಬುಧವಾರ ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಇಂದ್ರಜಿತ್ ಲಂಕೇಶ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದರು. 'ಮರಣೋತ್ತರ ಪರೀಕ್ಷೆ ಬಳಿಕ ಸಂಸ ಬಯಲು ರಂಗಮಂದಿರಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ' ಎಂದರು.

'ಕುಟುಂಬದವರು ಎಲ್ಲರೂ ಚರ್ಚಿಸಿ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಕೈಗೊಂಡಿದ್ದೇವೆ' ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.
ಮರಣೋತ್ತರ ಪರೀಕ್ಷೆ ಆರಂಭ : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಆರಂಭವಾಗಿದೆ. ಕವಿತಾ ಲಂಕೇಶ್, ಇಂದ್ರಜಿತ್ ಲಂಕೇಶ್, ನಟ ಪ್ರಕಾಶ್ ರೈ, ನಿರ್ಮಾಪಕ ಕೆ.ಮಂಜು ಸೇರಿದಂತೆ ಹಲವರು ಆಸ್ಪತ್ರೆಗೆ ಆಗಮಿಸಿದ್ದಾರೆ.
ಪೊಲೀಸರ ತನಿಖೆ ಚುರುಕು : ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಪೊಲೀಸರು ರಾತ್ರಿಯೇ ತನಿಖೆ ಆರಂಭಿಸಿದ್ದಾರೆ. ಗೌರಿ ಲಂಕೇಶ್ ನಿವಾದಲ್ಲಿನ ಎರಡು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸಿದ್ದರಾಮಯ್ಯಗೆ ಮಾಹಿತಿ : ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಲುಪಿಸಲಾಗುತ್ತಿದೆ. ಇಂದಿನ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿರುವ ಸಿದ್ದರಾಮಯ್ಯ ಪ್ರಕರಣದ ಬಗ್ಗೆ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದ ಮುಂದೆ ಸೆ.5ರ ಮಂಗಳವಾರ ರಾತ್ರಿ ಗುಂಡು ಹಾರಿಸಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿತ್ತು.











Click it and Unblock the Notifications