ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಗೌರವ್ ಗುಪ್ತ
ಬೆಂಗಳೂರು, ಏಪ್ರಿಲ್ 01; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅಧಿಕಾರ ವಹಿಸಿಕೊಂಡರು. ಆಯುಕ್ತರಾಗಿದ್ದ ಮಂಜುನಾಥ ಪ್ರಸಾದ್‌ರನ್ನು ಬುಧವಾರ ವರ್ಗಾವಣೆ ಮಾಡಲಾಗಿತ್ತು.
ಬಿಬಿಎಂಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎನ್. ಮಂಜುನಾಥ ಪ್ರಸಾದ್ ಗೌರವ್ ಗುಪ್ತಗೆ ಅಧಿಕಾರ ಹಸ್ತಾಂತರ ಮಾಡಿದರು. ಬಿಬಿಎಂಪಿ ಕೌನ್ಸಿಲರ್, ಮೇಯರ್ ಮತ್ತು ಉಪ ಮೇಯರ್ ಇಲ್ಲದ ಹಿನ್ನಲೆಯಲ್ಲಿ ಆಯುಕ್ತರೇ ಆಡಳಿತ ನೋಡಿಕೊಳ್ಳಬೇಕಿದೆ.
ಗೌರವ್ ಗುಪ್ತ ಇಷ್ಟು ದಿನ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಬುಧವಾರ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಸರ್ಕಾರ ನೇಮಕ ಮಾಡಿತ್ತು.

"ಆಡಳಿತಗಾರನಾಗಿ ಇಷ್ಟು ದಿನ ಸೇವೆ ಸಲ್ಲಿಸಿದ್ದು ಅತ್ಯಂತ ಸಂಸತ ಹಾಗೂ ತೃಪ್ತಿ ನೀಡಿದೆ. ಇನ್ನುಮುಂದೆ ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸುವ ಸುಸಂದರ್ಭ ಕೂಡಿ ಬಂದಿದೆ. ಬೆಂಗಳೂರು ಜನರಿಗೆ ಬಿಬಿಎಂಪಿಯಿಂದ ಉತ್ತಮ ಸೇವೆ ನೀಡುವುದು ನನ್ನ ಆದ್ಯ ಕರ್ತವ್ಯ ವಾಗಿದೆ" ಎಂದು ಗೌರವ್ ಗುಪ್ತ ಹೇಳಿದ್ದಾರೆ.
ಗೌರವ್ ಗುಪ್ತ1990ನೇ ಬ್ಯಾಚ್ ಐಎಎಸ್ ಅಧಿಕಾರಿ. ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಬೃಹತ್ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಬುಧವಾರ ಆಯುಕ್ತರಾಗಿ ಅವರನ್ನು ನೇಮಿಸಲಾಗಿತ್ತು.
ಅಧಿಕಾರಿಗಳ ಆಡಳಿತ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2015ರಲ್ಲಿ ಚುನಾವಣೆ ನಡೆದಿತ್ತು. ಆಯ್ಕೆಯಾಗಿದ್ದ 198 ಸದಸ್ಯರ ಅವಧಿ 2020ರ ಸೆಪ್ಟೆಂಬರ್ 10ಕ್ಕೆ ಅಂತ್ಯವಾಗಿದೆ. ಹೊಸದಾಗಿ ಚುನಾವಣೆ ನಡೆದು, ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಆಗುವ ತನಕ ಬಿಬಿಎಂಪಿಯ ಆಡಳಿತವನ್ನು ಅಧಿಕಾರಿಗಳೇ ನೋಡಿಕೊಳ್ಳಲಿದ್ದಾರೆ.












Click it and Unblock the Notifications