ವಿಲೇವಾರಿ ಸ್ಥಗಿತ, ಬೆಂಗಳೂರಿನ ರಸ್ತೆ ತುಂಬಾ ಕಸದ ರಾಶಿ
ಬೆಂಗಳೂರು, ಜೂನ್ 11 : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ಬಿಬಿಎಂಪಿಯ ಕಸ ಸಾಗಣೆ ಮಾಡುವ ಲಾರಿ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ನಗರದಲ್ಲಿ ರಾಶಿ-ರಾಶಿ ಕಸ ವಿಲೇವಾರಿಯಾಗದೆ ಉಳಿದಿದೆ.
ಬೆಂಗಳೂರು ಮಹಾನಗರ ಸ್ವಚ್ಛತೆ ಲಾರಿ ಮಾಲೀಕರು ಮತ್ತು ಗುತ್ತಿಗೆದಾರರ ಸಂಘ ಸೋಮವಾರದಿಂದ ಬಾಕಿ ಪಾವತಿ ಮಾಡುವಂತೆ ಒತ್ತಾಯಿಸಿ ಮುಷ್ಕರ ಆರಂಭಿಸಿದ್ದಾರೆ. ಆದ್ದರಿಂದ, ಕಸ ವಿಲೇವಾರಿ ಮಾಡಬೇಕಾದ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಬಾಲಸುಬ್ರಮಣ್ಯಂ ಅವರು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 'ಬಿಬಿಎಂಪಿ ಕಳೆದ 5 ತಿಂಗಳಿನಿಂದ ನಮಗೆ ಅನುದಾನ ನೀಡದೆ ಬಾಕಿ ಉಳಿಸಿಕೊಂಡಿದೆ. ಹಲವಾರು ಬಾರಿ ಮನವಿ ಮಾಡಿದರೂ ಬಿಡುಗಡೆ ಮಾಡಿಲ್ಲ' ಎಂದು ದೂರಿದರು.

ಸೋಮವಾರದಿಂದ ಲಾರಿ ಮಾಲೀಕರು ಮುಷ್ಕರ ಆರಂಭಿಸಿದ್ದು, ಕಸಗಳನ್ನು ತೆಗೆದುಕೊಂಡು ಹೋಗಬೇಕಾದ ಲಾರಿಗಳು ನಗರಕ್ಕೆ ಬಂದಿಲ್ಲ. ಪೌರ ಕಾರ್ಮಿಕರು ಮನೆ-ಮನೆಯಿಂದ ಕಸವನ್ನು ಸಂಗ್ರಹಣೆ ಮಾಡಿದರೂ ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಲಾರಿ ಮಾಲೀಕರ ಜೊತೆ ಮಂಗಳವಾರ ಸಭೆ ನಡೆಸುವ ಸಾಧ್ಯತೆ ಇದೆ. 'ಮುಷ್ಕರ ನಿರತರ ಬೇಡಿಕೆ ಈಡೇರಿಸುತ್ತೇವೆ, ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡುತ್ತೇವೆ' ಎಂದು ಪರಮೇಶ್ವರ ಹೇಳಿದ್ದಾರೆ.












Click it and Unblock the Notifications