Ganesh Chaturthi 2023: ಬೆಂಗಳೂರಿನ ದೇವಸ್ಥಾನಗಳಲ್ಲಿ ಜನವೋ ಜನ, ಎಲ್ಲಿ ನೋಡಿದ್ರೂ "ಗಣಪತಿ ಬಪ್ಪಾ ಮೋರಯಾ"...
ಬೆಂಗಳೂರು, ಸೆಪ್ಟೆಂಬರ್, 18: ಇಂದು (ಸೆಪ್ಟೆಂಬರ್ 18) ಗೌರಿ ಗಣೇಶ ಹಬ್ಬ ಹಿನ್ನಲೆ ನಗರಾದ್ಯಂತ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ವಿಘ್ನ ನಿವಾರಕ ವಿನಾಯಕನ ಪೂಜೆಯನ್ನು ಕಣ್ತುಂಬಿಕೊಳ್ಳಲು ನಗರದ ಪ್ರಮುಖ ದೇವಾಲಯಗಳಲ್ಲಿ ಜನ ಸಾಗರ ಸೇರಿದ್ದಾರೆ. ಅದರಲ್ಲೂ ಬೆಂಗಳೂರಿನ ಹಳೆಯ ಗಣಪತಿ ದೇವಾಲಯದಲ್ಲಿ ಅಂತೂ ಭಕ್ತ ಸಾಗರವೇ ಸೇರಿದೆ. ಸುಮಾರು ಬೆಳಗ್ಗೆ 7 ಗಂಟೆಯ ಹೊತ್ತಿಗೆ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಸರದಿಯಲ್ಲಿ ನಿಂತಿರುವುದು ಕಂಡುಬಂದಿದೆ.
ಇನ್ನು ಬೆಂಗಳೂರಿನ ಬಸವನಗುಡಿ ಅಲ್ಲಿರುವ ದೊಡ್ಡ ಗಣಪನ ಬಳಿ ಅಂತೂ ಕೇಳೋದೇ ಬೇಡ, ಮುಂಜಾನೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತಮ್ಮ ಪ್ರಾರ್ಥನೆ ಬೇಡಿಕೆ ಈಡೇರಿಕೆಗೆ ಪೂಜೆ ಸಲ್ಲಿಸಿದರು. ಹೀಗೆ ದೊಡ್ಡ ಗಣಪತಿ ದೇವಾಲಯದಲ್ಲಿ ಜನ ಸಾಗರವೇ ಸೇರಿತ್ತು.

ಬೆಳ್ಳಂಬೆಳಗ್ಗೆಯೇ ರಸ್ತೆ ಉದ್ದಕ್ಕೂ ಕಿಲೋ ಮೀಟರ್‌ಗಟ್ಟಲೇ ನಿಂತಿರುವ ಜನ ಗಣಪನ ಕಣ್ತುಂಬಿಕೊಳ್ಳಲು ಸಾಕಷ್ಟು ಸಮಯ ಕಾದಿದ್ದ ದೃಶ್ಯ ಕಂಡುಬಂತು. ಈ ದೇವಸ್ಥಾನದಲ್ಲಿ ಬೆಳಗ್ಗೆ 3 ಗಂಟೆಯಿಂದ ಗಣಪನಿಗೆ ವಿಶೇಷ ಅಭಿಷೇಕ ಮಾಡಲಾಗುತ್ತಿದೆ. ಬೆಳಗ್ಗೆ 3ರಿಂದ 4ರವರೆಗೆ ವಿಶೇಷವಾಗಿ ಗಣಪನಿಗೆ ಬೆಳ್ಳಿಯ ಆಭರಣದ ಮೂಲಕ ಅಲಂಕಾರ ಮಾಡಲಾಯಿತು. ಮುಂಜಾನೆ 3 ಗಂಟೆಗೆ ವಿನಾಯಕನಿಗೆ ಮೊಸರು, ಹಾಲು, ಕಬ್ಬಿನ ಹಾಲು, ಸಕ್ಕರೆ, ಜೇನುತುಪ್ಪದ ವಿಶೇಷ ಅಭಿಷೇಕ ಕೂಡ ಮಾಡಲಾಯಿತು.
ಇವತ್ತು ಚತುರ್ಥಿ ಹಿನ್ನೆಲೆ ವಿನಾಯಕನಿಗೆ ಬೆಳ್ಳಿ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ಕಿ.ಮೀ. ಗಟ್ಟಲೆ ಕ್ಯೂನಿಂತು ಭಕ್ತರು ದರ್ಶನ ಪಡೆದರು. ವಿಶೇಷವಾಗಿ 60 ವರ್ಷ ಮೇಲ್ಪಟ್ಟವರಿಗೆ ಮುಜರಾಯಿ ಸಚಿವರ ನಿರ್ದೇಶನದಂತೆ ನೇರ ದರ್ಶನಕ್ಕೆ ವ್ಯವಸ್ಥೆ ಕೂಡ ದೇವಾಲಯದ ಆವರಣದಲ್ಲಿ ಇತ್ತು. ಈ ಸಂಬಂಧ ಹಿರಿಯ ನಾಗರಿಕರ ಗಮನಕ್ಕೆ ಬೋರ್ಡ್ ಕೂಡ ಅಳವಡಿಕೆ ಮಾಡಲಾಗಿತ್ತು.

100 ಕೆ.ಜಿ.ಗೂ ಅಧಿಕ ಹಾಲಿನ ಅಭಿಷೇಕ, 100 ಕೆ.ಜಿ.ಗೂ ಅಧಿಕ ಮೊಸರಿನ ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಜೇನು ತುಪ್ಪದ ಅಭಿಷೇಕ, ಸಕ್ಕರೆ ಅಭಿಷೇಕ ಮಾಡಲಾಯಿತು. ವಿಶೇಷ ಅಂದ್ರೆ ಗಣಪನ ಕಂಪ್ಲೀಟ್ ಆಗಿ ಬೆಳ್ಳಿಯಿಂದ ಅಲಂಕಾರ ಮಾಡಲಾಗಿದೆ. ಮುಂಜಾನೆಯೇ ಬೆಳ್ಳಿಯಿಂದ ಅಲಂಕಾರ ಮಾಡಿದ್ದು, ಗಣೇಶ ಲಕಲಕ ಕಂಗೊಳಿಸುತ್ತಿದ್ದಾನೆ.
ಇನ್ನೂ ಸರ್ಕಾರದ ವತಿಯಿಂದ 10 ಸಾವಿರ ಉಚಿತ ಲಾಡನ್ನು ಕೂಡ ವಿತರಣೆ ಮಾಡಲಾಗಿದ್ದು, ಉಚಿತ ಪುಳಿಯೋಗೆರೆ ಪ್ರಸಾದ ಕೂಡ ನೀಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಜರಾಯಿ ಸಚಿವರಾಗಿ ರಾಮಲಿಂಗಾರೆಡ್ಡಿ ಅಧಿಕಾರ ವಹಿಸಿಕೊಂಡ ಬಳಿಕ ತಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ನೇರ ದರ್ಶನ ವ್ಯವಸ್ಥೆ ಇಲ್ಲಿ ಅತ್ಯುತ್ತಮವಾಗಿ ಮಾಡಲಾಗಿದೆ.












Click it and Unblock the Notifications