ಪ್ಲಾಸ್ಟಿಕ್ ವಿರುದ್ಧ ಗಾಂಧಿಗಿರಿ: ಪ್ಲಾಗ್ ರನ್‌ಗೆ ನೀವೂ ಹೆಜ್ಜೆ ಹಾಕಿ
ಬೆಂಗಳೂರು, ಅ.1: ಗಾಂಧಿ ಜಯಂತಿ ಅಂಗವಾಗಿ ಸಮಾನ ಮನಸ್ಕರೆಲ್ಲ ಒಟ್ಟುಗೂಡಿ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಅಭಿಯಾನ ಹಾಗೂ ಸ್ವಚ್ಛತೆಗಾಗಿ ಓಟ (ಪ್ಲಾಗ್ ರನ್) ಆಯೋಜಿಸಲಾಗಿದೆ.
ಓಟವೆಂದರೆ ಇದೊಂದು ಸ್ಪರ್ಧೆಯಲ್ಲ ಬದಲಾಗಿ ಓಟದ ಜತೆಗೆ ಕಣ್ಣಿಗೆ ಕಂಡ ಪ್ಲಾಸ್ಟಿಕ್ ಗಳನ್ನು ಆಯ್ದುಕೊಳ್ಳುತ್ತಾ ಸಾಗಬೇಕು, ಬಳಿಕ ಅದೆಲ್ಲವನ್ನು ಆಯೋಜಕರು ಗುರುತು ಮಾಡಿರುವ ಸ್ಥಳದಲ್ಲಿ ಇರಿಸಬೇಕಾಗುತ್ತದೆ. ಕೇವಲ ಒಂದು ಕಡೆ ಮಾತ್ರವಲ್ಲ ನಗರ 50 ಭಾಗಗಳಲ್ಲಿ ಏಕಕಾಲಕ್ಕೆ ಈ ಓಟವನ್ನು ಆಯೋಜನೆ ಮಾಡಲಾಗಿದೆ. ಈ ಪ್ಲಾಗ್ ರನ್‌ನಲ್ಲಿ ಒಟ್ಟು ಸಾವಿರ ಮಂದಿ ಪಾಲ್ಗೊಳ್ಳುತ್ತಾರೆ.

ಯುನೈಟೆಡ್ ವೇ ಬೆಂಗಳೂರು, ನಮ್ಮ ನಿಮ್ಮ ಸೈಕಲ್ ಫೌಂಡೇಶನ್, ಗೋ ನೇಟಿವ್, ಜಸ್ಟ್ ಬುಕ್ಸ್, ಪೌಂಟೇನ್ ಫಿಸ್ಟಿವಲ್, ಲಯನ್ಸ್, ಹಸಿರು ಸೇನೆ, ಬಸವ ಅಂಬರ ಇದಿಷ್ಟೂ ಸಂಸ್ಥೆಗಳು ಓಟದಲ್ಲಿ ಪಾಲ್ಗೊಳ್ಳಲಿವೆ. ಓಟಕ್ಕೆ ಒಂದೇ ದಿನ ಇದೆ ಆನ್‌ಲೈನ್‌ನಲ್ಲಿ ಈಗಲೇ ಹೆಸರು ನೋಂದಾಯಿಸಿಕೊಳ್ಳಿ.
ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾಕಷ್ಟು ಅಭಿಯಾನಗಳನ್ನು ಕೈಗೊಂಡ ಬಳಿಕ ಜನರಿಗೆ ಸಲ್ಪ ಸ್ವಲ್ಪ ಜಾಗೃತಿ ಬರುತ್ತಿದೆ, ಮಾಲ್, ಅಂಗಡಿಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಚರಂಡಿಗಳು, ರಸ್ತೆಯ ಅಕ್ಕಪಕ್ಕದ ಜಾಗಗಳು ಸೇರಿದಂತೆ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ರಾರಾಜಿಸುತ್ತಿತ್ತು, ಹಸುಗಳು, ಬೀದಿನಾಯಿಗಳು ಸೇರಿದಂತೆ ಹಲವು ಪ್ರಾಣಿಗಳು ತ್ಯಾಜ್ಯದ ಜೊತೆ ಇವುಗಳನ್ನು ಕೂಡ ಸೇವಿಸಿ ಕಾಯಿಲೆಗೆ ತುತ್ತಾಗುತ್ತಿದ್ದವು. ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನೀವು ನೆರವಾಗಿ, ಸ್ವಚ್ಛ ಭಾರತ ನಿರ್ಮಾಣಕ್ಕೆ ಮುಂದಾಗಿ.












Click it and Unblock the Notifications