ಹೊಸ ವರ್ಷ, ಹುಟ್ಟುಹಬ್ಬದ ಬಯಕೆ ಬಿಚ್ಚಿಟ್ಟ ಗಾಲಿ ರೆಡ್ಡಿ
ಬೆಂಗಳೂರು, ಜನವರಿ 10: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ತಡವಾಗಿ ತಮ್ಮ ಹೊಸ ವರ್ಷದ ರೆಸಲ್ಯೂಷನ್ ಪ್ರಕಟಿಸಿದ್ದಾರೆ. ತಮ್ಮ ಹುಟ್ಟುಹಬ್ಬದ(ಜ.11) ಅಂಗವಾಗಿ ತಮ್ಮ ಮುಂದಿನ ಯೋಜನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಬದುಕಿನ ಪುಟದಲ್ಲಿ ಹೊಸ ಅಧ್ಯಾಯ ಬರೆಯಲು ನಿಮ್ಮ ಹಾರೈಕೆ ಬೇಕು ಎಂದು ಕೇಳಿಕೊಂಡಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ.
ನಿಮ್ಮ ಹಾರೈಕೆ ನನಗೆ ಶ್ರೀರಕ್ಷೆ
ಈಸ ಬೇಕು ಇದ್ದು ಜಯಿಸಬೇಕು ಎಂದು ದಾಸರು ಹೇಳಿದಂತೆ ಹಲವು ಏಳು ಬೀಳುಗಳ ನಡುವೆಯೂ ನಿಮ್ಮೆಲ್ಲರ ಶುಭ ಹಾರೈಕೆಯಿಂದ ನಿರಂತರ ಹೊಸ ಭರವಸೆಯೊಂದಿಗೆ ಮುನ್ನಡೆಯುತ್ತಿರುವ ನಾನು ಇಂದು 52ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ.

2004, ಜನವರಿ 31ರಂದು ನನ್ನ ತಾಯಿಯವರು ಸ್ವರ್ಗಸ್ಥರಾದ ವರ್ಷದಿಂದ ನಾನು ಬಹಿರಂಗವಾಗಿ ಜನ್ಮದಿನ ಆಚರಿಸಿಕೊಳ್ಳದೆ ಕೇವಲ ದೇವರ ಪೂಜೆ, ಧ್ಯಾನ ಹಾಗೂ ಸಮಾಜದ ಸಮಸ್ತ ಜನರ ಹಿತಕ್ಕಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡುವ ಮೂಲಕ ಅತ್ಯಂತ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ.
ಈ ವರ್ಷವೂ ಯಾವುದೇ ಬಹಿರಂಗ ಕಾರ್ಯಕ್ರಮ ಹಮ್ಮಿಕೊಳ್ಳದೆ ಎಂದಿನಂತೆ ಸರಳವಾಗಿ ದೇವರ ಪೂಜೆಯೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ನನ್ನ ಹಿತೈಷಿಗಳು, ಆತ್ಮೀಯರು ನಮ್ಮ ಮನೆಯ ಬಳಿ ಶ್ರಮ ವಹಿಸಿ ಬಂದು ನಿರಾಶರಾಗದೆ ಇದ್ದಲ್ಲಿಂದಲೇ ಶುಭ ಹಾರೈಸಿ ಆಶೀರ್ವದಿಸಬೇಕು ಎಂದು ಕೋರುತ್ತೇನೆ.
ಸಾರ್ವಜನಿಕ ಜೀವನದಲ್ಲಿ ಮುಂಚೂಣಿಗೆ ಬಂದು ಮತ್ತೆ ನಿಮ್ಮೆಲ್ಲರ ಸೇವೆ ಮಾಡಲು ನಾನು ಮಾನಸಿಕವಾಗಿ ಸಿದ್ಧನಿದ್ದು, 2019ರಲ್ಲಿ ನನ್ನ ಬದುಕಿನ ಪುಟದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯಬೇಕು ಎಂದು ಬಯಸಿದ್ದೇನೆ. ನಿಮ್ಮ ಶುಭ ಹಾರೈಕೆ, ಆಶೀರ್ವಾದದಿಂದ ಆ ಕನಸು ಈಡೇರಲಿ ಎಂದು ಬಯಸುತ್ತೇನೆ.
ಧನ್ಯವಾದಗಳು
-ಗಾಲಿ ಜನಾರ್ದನ ರೆಡ್ಡಿ












Click it and Unblock the Notifications