ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಗೆ: ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ಮೇ 31: ಹೇಮಾವತಿ ಎಕ್ಸ್‌ಪ್ರೆಸ್ ಕಾಲುವೆ ಕಾಮಗಾರಿ ಮುಂದುವರಿಸಬೇಕೋ, ಬೇಡವೋ ಎಂಬುದರ ಕುರಿತು ತೀವ್ರ ಚರ್ಚೆಗಳು ಆಗುತ್ತಿವೆ. ಈ ಮಧ್ಯೆ ಶನಿವಾರ ಗುಬ್ಬಿಯಲ್ಲಿ ಕಾಮಗಾರಿ ವಿರೋಧಿ ಪ್ರತಿಭಟನೆ ನಡೆದಿದೆ. ಇತ್ತೀಚೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕಾಮಗಾರಿ ಆರಂಭಿಸದಂತೆ ಆಗ್ರಹಿಸಿದ್ದಾರೆ. ಇದೀಗ ಇದೆಲ್ಲವು ರಾಜಕೀಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.
ತಾಂತ್ರಿಕ ಸಮಿತಿಯು ನೀಡಿದ ವರದಿಯನ್ನು ಆಧರಿಸಿ ತುಮಕೂರಿನಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯನ್ನು ಆರಂಭಿಸಲಾಗಿದೆ. ಹೀಗಿದ್ದರೂ ಅದು ನಿಲ್ಲಿಸಬೇಕು ಎಂದು ಬಿಜೆಪಿ ವಿರೋಧಿಸುತ್ತಿದೆ. ಇದೇ ವಿಚಾರವಾಗಿ ಗುಬ್ಬಿಯಲ್ಲಿ ಬಿಜೆಪಿ ಪ್ರತಿಭಟನೆ ವಿರುದ್ಧ ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರಿಗೆ ಸಚಿವರು ಪ್ರತಿಕ್ರಿಯಿಸಿದರು.

ತುಮಕೂರಿನಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆತ್ತಿರುವ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತುಮಕೂರಲ್ಲಿ ಎಕ್ಸ್ ಪ್ರೆಸ್ ಕೆನಾಲ್ ಮಾಡಬೇಕು ಎಂದು ತೀರ್ಮಾನ ತೆಗೆದುಕೊಂಡು, 1500 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಯಿತು.
ಕಾಮಗಾರಿ ಆರಂಭಕ್ಕೆ ತಾಂತ್ರಿಕ ವರದಿ ನೀಡಿದೆ
ಕೆಲಸ ಶುರುವಾಗುತ್ತಿದ್ದಂತೆ ಬಿಜೆಪಿಯವರು ವಿರೋಧ ಮಾಡಿದರು. ಉಪ ಮುಖ್ಯಮಂತ್ರಿಯವರು ಬಾರಿ ಸಭೆ ನಡೆಸಿದರು. ಸಂಸದರು, ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ಟೆಕ್ನಿಕಲ್ ಕಮಿಟಿ ರಚಿಸಬೇಕು ಎಂದು ಒತ್ತಾಯಿಸಿದ್ದರು. ಕಾಮಗಾರಿ ಮಾಡಬಹುದು ಎಂದು ಟೆಕ್ನಿಕಲ್ ಕಮಿಟಿ ವರದಿ ನೀಡಿದೆ. ಅದರಂತೆ ಕೆಲಸ ಶುರುವಾಯಿತು. ವರದಿಯಲ್ಲಿ ಲಿಂಕ್‌ಕೆನಲ್‌ನಿಂದ ತೊಂದರೆ ಆಗುತ್ತದೆ ಎಂದು ಬಂದಿದ್ದರೆ ಮಾಡುತ್ತಿರಲಿಲ್ಲ. ಈಗ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು.
ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಲಿಂಕ್ ಫೀಡರ್ ಯೋಜನೆ ಅವೈಜ್ಞಾನಿಕ ವಾಗಿದೆ. ಇದರಿಂದ ಜಿಲ್ಲೆಯ ರೈತರಿಗೆ ತೊಂದರೆ ಆಗುವ ಸಾಧ್ಯವಿದೆ. ನೀರಿನ ಕೊರತೆ ಆಗಲಿದೆ ಎಂದು ಈಗಾಗಲೇ ತಂತ್ರಜ್ಞರು ಅಭಿಪ್ರಾಯ ಹೊರ ಹಾಕಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಈ ಯೋಜನೆ ಕೈ ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೆ ಯೋಜನೆಗೆ ವಿರೋಧ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಒಂದು ವೇಳೆ ಈ ಕಾಮಗಾರಿ ಹಿಂದಪಡೆಯದೇ ಮುಂದುವರಿಸಿದರೆ ಜಿಲ್ಲೆ ವ್ಯಾಪ್ತಿಯ ರೈತರಿಗೆ ತೊಂದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ವಿ.ಸೋಮಣ್ಣ ಅವರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಗೃಹ ಸಚಿವರ ಹೇಳಿಕೆ ನೋಡಿದರೆ ಸರ್ಕಾರ ಯೋಜನೆ ನಿಲ್ಲಿಸುತ್ತಾ, ಮುಂದುವರಿಸುತ್ತಾ ಎಂಬದು ಕಾದು ನೋಡಬೇಕಿದೆ.












Click it and Unblock the Notifications