ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದ ಪರಮೇಶ್ವರ್

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್, ನಮ್ಮ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕೆಪಿಸಿಸಿ ನಿಯೋಜಿಸಿದ್ದ ವೀಕ್ಷಕರು ಈಗಾಗಲೇ ಲೋಕಸಭಾ ಚುನಾವಣೆ ಯಲ್ಲಿ ಸ್ಪರ್ಧಿಸುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಿದ್ದಾರೆ ಎಂದರು.
ಡಿ.15ರಂದು ಪ್ರದೇಶ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿ ಜಯ್ ಸಿಂಗ್ ಅವರ ಜೊತೆ ಚರ್ಚಿಸಿ ನಂತರ ಎಐಸಿಸಿ ರಚಿಸಿದ ಅಖಿಲ ಭಾರತ ಕಾಂಗ್ರೆಸ್ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು. ಅಲ್ಲಿ ಚರ್ಚೆಯಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಸ್ಪಷ್ಟವಾಗುತ್ತದೆ. ಈ ಎಲ್ಲ ಬೆಳವಣಿಗೆಗಳು ನಮ್ಮ ಪಕ್ಷದಲ್ಲಿ ನಡೆದಿವೆ ಎಂದು ಪರಮೇಶ್ವರ್ ವಿವರಿಸಿದರು.
ಸರ್ಕಾರದಲ್ಲಿ ಗೊಂದಲವಿಲ್ಲ : ಕೆಲ ಶಾಸಕರು ಸರ್ಕಾರದ ವರ್ತನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿ ಪರಮೇಶ್ವರ್, ಅಂಥ ಯಾವುದೇ ಅಸಮಾಧಾನ ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಪಕ್ಷದ ಶಾಸಕ, ಸಚಿವರ ಹಾಗೂ ಸಂಸದರ ವೌಲ್ಯಮಾಪನ ಎಐಸಿಸಿ ನಿಯಮದಂತೆ ನಡೆಯುತ್ತದೆ ಎಂದರು.
ಲೋಕಸಭಾ ಚುನಾವಣೆ ನಂತರ ವೌಲ್ಯ ಮಾಪನದಲ್ಲಿ ಹಿನ್ನಡೆಯಾದ ಕೆಲ ಸಚಿವರನ್ನು ಬದಲಿಸುವ ಸಾಧ್ಯತೆ ಬಗ್ಗೆ ಸ್ಪಷೃಪಡಿಸಿದ ಪರಮೇಶ್ವರ್, 'ಅವಶ್ಯಕತೆಯಿದ್ದರೆ ಬದಲಾವಣೆ ಮಾಡಲಾಗುವುದು. ಅದು ಮುಖ್ಯ ಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅದು ಎಲ್ಲ ಸರ್ಕಾರಗಳಲ್ಲಿ ನಿರಂತರವಾಗಿ ನಡೆದು ಕೊಂಡು ಬರುತ್ತಿರುವ ಸಂಗತಿ' ಎಂದರು.
ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಅವರ ಮೇಲೆ ಬಂದಿರುವ ಆರೋಪದ ಬಗ್ಗೆ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಅವರಿಂದ ಮಾಹಿತಿ ತರಿಸಿ ಕೊಂಡಿದ್ದೇವೆ. ಹಾಗೆಯೇ ಜಿಲ್ಲಾ ಕಾಂಗ್ರೆಸ್ ಸಮಿತಿ ನೀಡಿರುವ ವರದಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಯುಪಿಎ ನೇತೃತ್ವದ ಸರಕಾರ ಮೂರನೆ ಅವಧಿಗೂ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಪರಮೇಶ್ವರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಕೆಪಿಸಿಸಿ ಸಿದ್ಧತೆ ನಡೆಸಿದ್ದು, ಜಿಲ್ಲಾ ವೀಕ್ಷಕರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.












Click it and Unblock the Notifications