ಹಣ್ಣುಗಳಿಂದ ಅಲಂಕಾರಗೊಂಡ ಗಣಪನನ್ನು ಕಣ್ತುಂಬಿಕೊಂಡ ಭಕ್ತರು
ಬೆಂಗಳೂರು, ಸೆ.01: ಸಂಭ್ರಮ, ಸಡಗರದ ಗಣೇಶೋತ್ಸವ ಅಂಗವಾಗಿ ಜೆ.ಪಿ.ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಹೂವು, ಹಣ್ಣಗಳಿಂದ ಅಲಂಕಾರಗೊಂಡಿದ್ದ ಗಣೇಶನನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಪ್ರತಿ ವರ್ಷದಂತೆ ಈ ವರ್ಷವು ಜೆ.ಪಿ.ನಗರದಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಇಲ್ಲಿನ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಗಣೇಶ ಮೂರ್ತಿಗೆ ಅಲಂಕಾರ ಕೂಡ ಅಷ್ಟೇ ವಿಭಿನ್ನವಾಗಿರುತ್ತದೆ. ನೋಡುಗರನ್ನು ತನ್ನತ್ತ ಸೆಳೆಯುವಂತೆ ವಿವಿಧ ಹತ್ತು ಬಗೆಯ ಹೂವುಗಳು, ಹಣ್ಣುಗಳು, ಸೊಪ್ಪುಗಳಿಂದ ಗಣೇಶನನ್ನು ಅಲಂಕಾರಗೊಳಿಸಲಾಗಿದೆ.
ಈ ಸಂಭ್ರಮವನ್ನು ಬೆಂಗಳೂರಿನ ನಾಗರಿಕರು, ಭಕ್ತರು ಮೂರು ದಿವಸ ಕಣ್ತುಂಬಿಕೊಳ್ಳಲು ಅಕವಾಶ ಮಾಡಿಕೊಡಲಾಗಿದೆ.

ನಿತ್ಯ ಸಾವಿರಾರು ಜನ ದೇವಸ್ಥಾನಕ್ಕೆ ಬರುತ್ತಾರೆ. ಹಣ್ಣುಗಳನ್ನು ಬಳಸಿಕೊಂಡು ಮಾಡುವ ಈ ಅಲಂಕಾರ ಕಂಡು ಭಕ್ತರು ಸಂತಸ ವ್ಯಕ್ತಪಡಿಸುತ್ತಾರೆ ಎಂದು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ ಟ್ರಸ್ಟಿ ರಾಮ್ ಮೋಹನ್ ರಾಜ್ ತಿಳಿಸಿದರು.
ಪ್ರಸಾದದ ರೂಪದಲ್ಲಿ ಹಣ್ಣು ವಿತರಣೆ
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂರನೇ ದಿನ ಹಣ್ಣುಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಅಲಂಕಾರಕ್ಕೆ ಬಳಸಿದ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕುವ ಪದ್ಧತಿ ಇಲ್ಲಿಲ್ಲ. ಬಳಸಿದ ಹಣ್ಣು ಹಂಪಲು, ವಸ್ತುಗಳನ್ನು ನೋಡಲು ಬರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಿಗಬೇಕು ಎಂಬುದು ನಮ್ಮ ಮುಖ್ಯ ಉದ್ಧೇಶವಾಗಿದೆ. ಹೀಗಾಗಿಯೇ ಮೂರನೆ ದಿನ ಅವುಗಳನ್ನು ಭಕ್ತರಿಗೆ ವಿತರಿಸುತ್ತೇವೆ. ಈ ರೀತಿಯ ಗಣಪತಿಯ ವಿಶೇಷ ಅಲಂಕಾರದ ಹಿಂದೇ ಮತ್ತೊಂದು ಮಹತ್ತರ ಉದ್ದೇಶವಿದೆ. ಹೂವು ಹಣ್ಣುಗಳನ್ನು ಬಳಸುವ ಮೂಲಕ ನಾವು ಗಣೇಶೋತ್ಸವವನ್ನು ಪರಿಸರಕ್ಕೆ ಪೂರಕವಾಗಿ ನಡೆಸುತ್ತೇವೆ ಎಂದು ಅವರು ವಿವರಿಸಿದರು.

ಜೆ.ಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಈ ಬಾರಿ ಗಣೇಶ ಚತುರ್ಥಿಯ ಪ್ರಯುಕ್ತ ಸಿಬೇಕಾಯಿ, ಕಲ್ಲಂಗಡಿ, ಡ್ರಾಗನ್ ಪ್ರೂಟ್, ದಾಳಿಂಬೆ, ಟೊಮ್ಯಾಟೋ ಹೀಗೆ ವಿವಿಧ 10 ಬಗೆಯ ಹಣ್ಣುಗಳನ್ನು, ಮುಸುಕಿನ ಜೋಳ, ತರಹೇವಾರಿ ಹೂವುಗಳು ಹಾಗೂ ಸೊಪ್ಪುಗಳನ್ನು ಬಳಸಿಕೊಂಡು ಆಲಂಕಾರ ಮಾಡಲಾಗಿದೆ.
ಈ ವರ್ಷ ಕೊರೊನಾ ಮಹಾಮಾರಿ ಕಡಿಮೆ ಆಗಿದ್ದರಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಪ್ರತ್ಯೇಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸದೇ ದೇವಸ್ಥಾನದಲ್ಲಿ ಇರುವ ಮೂರ್ತಿಗೆ ಹೂವು, ಹಣ್ಣು, ಸೊಪ್ಪುಗಳಿಂದ ಸಿಂಗರಿಸಲಾಗಿದೆ. ಬಹು ವರ್ಷಗಳಿಂದ ಈ ದೇವಸ್ಥಾನದಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದರು.












Click it and Unblock the Notifications