ಬೆಂಗಳೂರು ಬಳಿ ಐಫೋನ್ ತಯಾರಿಕಾ ಕಂಪನಿಗೆ ಭೂಮಿ ನೀಡಿದ ಸರ್ಕಾರ- ಎಲ್ಲಿ? ಎಷ್ಟು ಸಾವಿರ ಉದ್ಯೋಗ ಸೃಷ್ಟಿ? ತಿಳಿಯಿರಿ
ಬೆಂಗಳೂರು, ಜುಲೈ 11: ಬೆಂಗಳೂರಿನ ಬಳಿ ಐಫೋನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರವು ಫಾಕ್ಸ್‌ಕಾನ್ ಕಂಪನಿಗೆ ಭೂಮಿಯನ್ನು ಹಸ್ತಾಂತರಿಸಿದೆ. ತೈವಾನ್ ಮೂಲಕ ಎಲೆಕ್ಟ್ರಾನಿಕ್ ತಯಾರಕ ಕಂಪನಿಯು ಇದೇ ತಿಂಗಳು ಘಟಕವನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಲಿದೆ ಎಂದು ತಿಳಿದುಬಂದಿದೆ.
ಇದೇ ಸಂಸ್ಥೆಯಿಂದ ಹೂಡಿಕೆಯನ್ನು ಆಕರ್ಷಿಸಲು ನೆರೆಯ ತೆಲಂಗಾಣದಿಂದ ತೀವ್ರವಾದ ಲಾಬಿ ನಡೆದಿದೆ. ಇದರ ನಡುವೆಯೇ ಫಾಕ್ಸ್‌ಕಾನ್ ಕಂಪನಿಗೆ ಸರ್ಕಾರ ಜಾಗ ನೀಡಿರುವುದು ಉದ್ಯೋಗ ಆಕಾಂಕ್ಷಿಗಳ ಭರವಸೆಯನ್ನು ಹೆಚ್ಚಿಸದೆ.
ರಾಜ್ಯದಲ್ಲಿ ಐಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸಲು 968 ಮಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡುವುದಾಗಿ ಮಾರ್ಚ್‌ನಲ್ಲಿ ಫಾಕ್ಸ್‌ಕಾನ್ ಘೋಷಿಸಿತ್ತು.

ತೈವಾನ್ ಮೂಲಕ ಕಂಪನಿಯು ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಹಿಂದೆ ಸರಿದಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಭೂಮಿ ತೆಗೆದುಕೊಂಡಿರುವುದು ಆಶಾದಾಯಕವಾಗಿದೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಹರ್ಷ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲಿ ಯೋಜನೆಗಾಗಿ ಫಾಕ್ಸ್‌ಕಾನ್ ಈಗಾಗಲೇ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ 'ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಗೆ ತಿಳಿಸಿದ್ದಾರೆ.
'ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶದಲ್ಲಿನ ಭೂಮಿಯನ್ನು ಹಸ್ತಾರಿಸಲಾಗಿದೆ. 300 ಎಕರೆ ಪ್ರದೇಶದಲ್ಲಿ ಅವರ ಫೋನ್ ಉತ್ಪಾದನಾ ಘಟಕವು ಬರಲಿದೆ' ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು, 'ಏಪ್ರಿಲ್ 2024 ರಿಂದ ಫಾಕ್ಸ್‌ಕಾನ್ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಲಿದೆ. ಬೆಂಗಳೂರಿನ ಸ್ಥಾವರದಲ್ಲಿ ಐಫೋನ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲಿದೆ' ಎಂದು ಹೇಳಿದ್ದಾರೆ.
ಜುಲೈ 1 ರೊಳಗೆ ಭೂಮಿಯನ್ನು ಹಸ್ತಾಂತರಿಸುವುದಾಗಿ ಘೋಷಿಸಿದ್ದಲ್ಲದೆ, ರಾಜ್ಯ ಸರ್ಕಾರವು 5 ಕನಿಷ್ಠ ಲಿಕ್ವಿಡ್ ಡಿಸ್ಚಾರ್ಜ್‌ಗಳನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ. ನೀರು, ವಿದ್ಯುತ್ ಸರಬರಾಜು, ರಸ್ತೆ ಸಂಪರ್ಕ ಮತ್ತು ಇತರ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪಾಟೀಲ್ ತಿಳಿಸಿದರು.
ಈ ಯೋಜನೆಗೆ 8, 000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಇದು 50, 000 ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.












Click it and Unblock the Notifications