ಎಎಪಿ ಸೇರಲಿರುವ ಕರ್ನಾಟಕದ 'ಖೇಮ್ಕಾ', ನಿವೃತ್ತ ಕೆಎಎಸ್ ಅಧಿಕಾರಿ ಕೆ ಮಥಾಯಿ
ಬೆಂಗಳೂರು, ಏಪ್ರಿಲ್ 20: ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಗಟ್ಟಿಗೊಳ್ಳಲು ದಟ್ಟ ಹೆಜ್ಜೆಗಳನ್ನಿಡುತ್ತಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಕರ್ನಾಟಕದ ಕಡೆ ಗಮನ ಕೇಂದ್ರೀಕರಿಸಿದೆ. ಐಪಿಎಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮತ್ತೊಬ್ಬ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದ ಕೆ. ಮಥಾಯಿ ಆಮ್ ಆದ್ಮಿ ಪಕ್ಷ (AAP) ಸೇರಲು ವೇದಿಕೆ ಸಿದ್ಧವಾಗಿದೆ.
ಕೆ. ಮಥಾಯಿ ಯಾರು?: ಕೆ ಮಥಾಯಿ ಕೆಎಎಸ್ ಅಧಿಕಾರಿ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಬೆಂಗಳೂರು ಪಾಲಿಗೆ ಚಿರಪರಿಚಿತರಾಗಿದ್ದವರು ಕೆ ಮಥಾಯಿ. ಸಕಾಲ , ಬಿಬಿಎಂಪಿ ಜಾಹೀರಾತು ವಿಭಾಗದಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡವರು.

ಕರ್ನಾಟಕದ ಖೇಮ್ಕಾ ಮಥಾಯಿ
ಕರ್ನಾಟಕದ ಖೇಮ್ಕಾ ಎಂದೇ ವಿಖ್ಯಾತಿ ಪಡೆದಿದ್ದ ಅಧಿಕಾರಿ. ಕೆ ಮಥಾಯಿಯವರು ಕರ್ನಾಟದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ತಮ್ಮ ವೃತ್ತಿಯನ್ನು ಆರಂಭಿಸಿದ ಕೆ ಮಥಾಯಿ ಕೆಲವು ದಿಟ್ಟಕ್ರಮಗಳನ್ನು ಕೈಗೊಂಡಿದ್ದರಿಂದ ಕರ್ನಾಟಕದ ಖೇಮ್ಕಾ ಎಂದೇ ಖ್ಯಾತಿಯನ್ನು ಗಳಿಸಿದ್ರು. ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿದ ಕೆ ಮಥಾಯಿಯವರು ಉತ್ತಮ ಹೆಸರನ್ನು ಗಳಿಸಿದ್ದಾರೆ.

18 ವರ್ಷಗಳಲ್ಲಿ 28 ಕ್ಕೂ ಹೆಚ್ಚು ಸಲ ವರ್ಗಾವಣೆ!
ಕೆ ಮಥಾಯಿಯವರು ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡಿದ್ದೇ ತಪ್ಪಾಗಿ ಹೋಗಿತ್ತು. ಮಥಾಯಿಯವರು ಕೆಎಎಸ್ ಅಧಿಕಾರಿಯಾಗಿ 18 ವರ್ಷಗಳ ವೃತ್ತಿ ಬದುಕಲ್ಲಿ ಮಾಡಿದ್ದಾರೆ. ನಿಷ್ಠರಿಗೆ ಸಿಗುವ ಬಹುಮಾನವೇ ವರ್ಗಾವಣೆ. 18 ವರ್ಷದಲ್ಲಿ ಒಟ್ಟು 28 ಕ್ಕೂ ಹೆಚ್ಚು ಸಲ ಕೆ ಮಾಥಾಯಿಯವರ ವರ್ಗಾವಣೆಯಾಗಿದೆ. ಇನ್ನು ತಮ್ಮ ವೃತ್ತಿ ಜೀವನ ಕೊನೆಯಲ್ಲಿ ಬಿಡಿಎ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿ 2020 ರಲ್ಲಿ ಕರ್ತವ್ಯದಿಂದ ನಿವೃತ್ತಿಯನ್ನು ಪಡೆದಿದ್ದಾರೆ.

ಸಾವಿರಾರು ಕೋಟಿ ಹಣ ಸೋರಿಕೆ ಬಹಿರಂಗ
ಬಿಬಿಎಂಪಿ ಜಾಹೀರಾತು ವಿಭಾಗದಲ್ಲಿ ಸಾವಿರಾರು ಕೋಟಿ ಹಣ ಸೋರಿಕೆಯಾಗ್ತಿತ್ತು. 2015ರಲ್ಲಿ ಬಿಬಿಎಂಪಿಯ ಜಾಹೀರಾತು ವಿಭಾಗದ ಹಣ ಸೋರಿಕೆ ತಡೆಯಲು ದಿಟ್ಟ ಕ್ರಮ ಕೈಗೊಳ್ಳಲು ಎಂಟಕ್ಕೂ ಹೆಚ್ಚು ಸಲ ವರದಿಯನ್ನು ನೀಡಿದ್ರು. ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.

ಸಾಮಾಜಿಕ ಕಳಕಳಿಯ ಹೋರಾಟ.
ಮಥಾಯಿ ವಿಶಿಷ್ಟ ವ್ಯಕ್ತಿತ್ವ, ಪ್ರತಿಭಾವಂತ ಕೆಎಎಸ್ ಬಳಿಕ ಎಲ್ ಎಲ್ ಬಿ ಮುಗಿಸಿದ್ದ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ರು. ಕುಟುಂಬದ ಇತರೆ ಸದಸ್ಯರು ವಕೀಲ ವೃತ್ತಿಯಲ್ಲೇ ಇರೋದ್ರಿಂದ ಕಾನೂನು ಹೋರಾಟಗಳಿಗೆ ಕುಂದು ಕೊರತೆ ಉಂಟಾಗಲಿಲ್ಲ. ಕಾನೂನು ಹೋರಾಟದ ಜೊತೆಗೆ ಸಾಮಾಜಿಕ ಕಳಕಳಿಯ ಹೋರಾಟಗಳನ್ನು ಮಾಡಿದ್ದು. ಭ್ರಷ್ಟರ ವಿರುದ್ಧ ಹೋರಾಡಿದ ಶ್ರೇಯಸ್ಸು ಕೆ ಮಥಾಯಿಯವರಿಗೆ ಸಲ್ಲುತ್ತದೆ.

ಆಮ್ ಆದ್ಮಿ ಪಾರ್ಟಿಯ ಆಯ್ಕೆ ಏಕೆ..?
ಆಮ್ ಆದ್ಮಿ ಪಾರ್ಟಿಯಲ್ಲಿ ಜನಸಾಮಾನ್ಯನೇ ನಿಜವಾದ ನಾಯಕ. ನಾನು ವೃತ್ತಿ ಜೀವನದಿಂದ ಹಿಡಿದು ಇಲ್ಲಿಯ ತನಕ ಭ್ರಷ್ಟಚಾರದ ವಿರುದ್ದ ಹೋರಾಟವನ್ನು ಮಾಡಿಕೊಂಡು ಬಂದಿದ್ದೇನೆ. ನನಗೆ ಆಮ್ ಆದ್ಮಿ ಪಕ್ಷ ಸರಿಯಾಗಿ ಹೊಂದಾಣಿಕೆಯಾಗುತ್ತೇ ಹೀಗಾಗಿ ಆಮ್ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ. ನನಗೆ 15 ವರ್ಷ ಭ್ರಷ್ಟಾಚಾರದ ವಿರುದ್ದ ಹೋರಾಟವನ್ನು ಮಾಡಿದ ಅನುಭವವಿದೆ, ಯಾವುದೇ ಕಂಡೀಷನ್ ಇಲ್ಲದೇ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಎಂದು ಕೆ ಮಥಾಯಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications