K.Kasturirangan: ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ವಿಧಿವಶ
ಬೆಂಗಳೂರು, ಏಪ್ರಿಲ್ 25: ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಅವರು ಇಂದು (ಏಪ್ರಿಲ್ 25) ಶುಕ್ರವಾರ ವಿಧಿವಶರಾಗಿದ್ದಾರೆ. 84 ವಯಸ್ಸಿನ ಕೆ.ಕಸ್ತೂರಿ ರಂಗನ್ ಅವರು ಬೆಂಗಳೂರಿನ ಕೊಡಿಗೇನಹಳ್ಳಿ ನಿವಾಸದಲ್ಲಿ ನೆಲೆಸಿದ್ದು, ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳಿದ್ದಾರೆ ಎಂದು ತಿಳಿದು ಬಂದಿದೆ.
ಕೆ. ಕಸ್ತೂರಿ ರಂಗನ್ ಅವರು ಪರಿಸರ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ರಾಜ್ಯಸಭೆ ಸದಸ್ಯರು ಕೂಡ ಆಗಿದ್ದರು. ಅಲ್ಲದೇ ಪಶ್ಚಿಮ ಘಟ್ಟ ಸಂರಕ್ಷಣೆಗೆ ಕಸ್ತೂರಿ ರಂಗನ್ ಅವರು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದರು. ಇಸ್ರೋ ಮುಖ್ಯಸ್ಥರಾಗಿ ಕೂಡ ಭಾರತದ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೆ.ಕಸ್ತೂರಿ ರಂಗನ್ ಅವರ ನಿಧನಕ್ಕೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸಿದ್ದ ಖ್ಯಾತ ಖಭೌತ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅವರ ನಿಧನದಿಂದ ಆಘಾತವಾಗಿದೆ. ಕರ್ನಾಟಕ ಮೂಲದ ಡಾ.ಕಸ್ತೂರಿ ರಂಗನ್ ಅವರಿಗೆ ನಮ್ಮ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿ ಇತ್ತು.
ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಗೆ ದೀರ್ಘ ಕಾಲ ಅಧ್ಯಕ್ಷರಾಗಿ ಮತ್ತು ಕೇಂದ್ರದ ಬಾಹ್ಯಾಕಾಶ ಮಂಡಳಿಯ ನಿರ್ದೇಶಕರಾಗಿ ಡಾ.ಕಸ್ತೂರಿ ರಂಗನ್ ಅವರು ಸಲ್ಲಿಸಿದ ಸೇವೆಯಿಂದಾಗಿ ಭಾರತ ಇಂದು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಡಾ.ಕಸ್ತೂರಿ ರಂಗನ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದಿದ್ದಾರೆ.












Click it and Unblock the Notifications