ಬೆಂಗಳೂರಿನಲ್ಲಿದ್ದ ಮಾಜಿ ರಾಷ್ಟ್ರಪತಿ ವಿವಿ ಗಿರಿ ಮನೆ ನೆಲಸಮ
ಬೆಂಗಳೂರಿನ ಜಯನಗರದ ಮಾಧವನ್ ಪಾರ್ಕ್ ಬಳಿಯಲ್ಲಿದ್ದ ಭಾರತದ ಮಾಜಿ ರಾಷ್ಟ್ರಪತಿ ವಿವಿ ಗಿರಿಯವರಿಗೆ ಸೇರಿದ ಮನೆ ನೆಲಸಮವಾಗಿದೆ.
ಬೆಂಗಳೂರು, ಏಪ್ರಿಲ್ 5: ಮಾಜಿ ರಾಷ್ಟ್ರಪತಿ, ಕರ್ನಾಟಕದ ಮಾಜಿ ರಾಜ್ಯಪಾಲ, ಭಾರತ ರತ್ನ, ಸ್ವಾತಂತ್ರ್ಯ ಹೋರಾಟಗಾರ ವಿವಿ ಗಿರಿಯವರು ಬಾಳಿ ಬದುಕಿದ ಬೆಂಗಳೂರಿನ ಮನೆ ನೆಲಸಮವಾಗಿದೆ.
ಬೆಂಗಳೂರಿನ ಜಯನಗರ ಮೊದಲ ಹಂತದಲ್ಲಿ ಮಾಧವನ್ ಪಾರ್ಕ್ ಬಳಿಯಲ್ಲಿದ್ದ ವಿವಿ ಗಿರಿಯವರಿಗೆ ಸೇರಿದ ಮನೆ ಇತ್ತು. ಕೆಲವು ದಿನಗಳ ಹಿಂದೆ ಈ ಮನೆಯನ್ನು ನೆಲಸಮ ಮಾಡಲಾಗಿದೆ. "ಈ ಜಾಗವನ್ನು ಇತ್ತೀಚೆಗೆ ರಾಜಕಾರಣಿಯೊಬ್ಬರು ಖರೀದಿಸಿದ್ದಾರಂತೆ. ಹೀಗಾಗಿ ಅಲ್ಲಿದ್ದ ಮನೆಯನ್ನು ನೆಲಸಮ ಮಾಡಲಾಗಿದೆ," ಎಂದು ಸ್ಥಳೀಯರು ಹೇಳಿದ್ದಾರೆ.[ರಾಮನವಮಿ ನೆಪದಲ್ಲಿ ರಾಮದೇವರ ಬೆಟ್ಟಕ್ಕೆ ಭೇಟಿ]

ವರಾಹಗಿರಿ ವೆಂಕಟ ಗಿರಿ 1969 ರಿಂದ 1974 ರವೆರಗೆ ಭಾರತದ ರಾಷ್ಟ್ರಪತಿಗಳಾಗಿದ್ದರು. 1965 ರಿಂದ 67ರ ವರೆಗೆ ಕರ್ನಾಟಕದ ರಾಜ್ಯಪಾಲರೂ ಆಗಿಯೂ ಸೇವೆ ಸಲ್ಲಿದ್ದಾರೆ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರಿಗೆ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಯೂ ನೀಡಿ ಗೌರವಿಸಲಾಗಿದೆ.

"ಮದ್ರಾಸ್ ಹೈಕೋರ್ಟಿನಲ್ಲಿ ವಕೀಲರಾಗಿದ್ದ ವಿವಿ ಗಿರಿ ಹೆಚ್ಚಾಗಿ ಇರುತ್ತಿದ್ದುದು ಚೆನ್ನೈನಲ್ಲೇ. ಆದರೆ ಇಲ್ಲಿಗೆ ಬಂದಾಗಿ ಈ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಇದನ್ನು ಬಹಳ ಹಿಂದೆಯೇ ಅವರು ತಮ್ಮ ಅಳಿಯನಿಗೆ ಕೊಟ್ಟಿದ್ದರು," ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರು.[ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನ ಮಳೆ?]

ನಂತರ ಕಳೆದ 15 ವರ್ಷಗಳ ಹಿಂದೆ ವಿವಿ ಗಿರಿ ಅಳಿಯ ಈ ಮನೆಯನ್ನು ಮಾರಿ ಇಲ್ಲಿಂದ ಜೆಪಿ ನಗರಕ್ಕೆ ಹೋಗಿ ನೆಲೆಸಿದ್ದಾರಂತೆ. "ಅವರ ಅಳಿಯ ಈ ಮನೆಯಲ್ಲಿ ನಾಯಿ ಸಾಕಿಕೊಂಡಿದ್ದರು. ಹೈಬ್ರಿಡ್ ನಾಯಿ ಮರಿಗಳನ್ನು ಮಾರುತ್ತಿದ್ದರು. ಕಳೆದ 15 ವರ್ಷಗಳಿಂದ ಈ ಮನೆಯಲ್ಲಿ ಯಾರ್ಯಾರೋ ಬಂದು ಇರುತ್ತಿದ್ದರು. ಇತ್ತೀಚೆಗೆ ಅದನ್ನು ರಾಜಕಾರಣಿಯೊಬ್ಬರು ಖರೀದಿಸಿದ್ದಾರಂತೆ. ಹಾಗಾಗಿ ಈ ಮನೆಯನ್ನು ಕೆಡವಲಾಗಿದೆ," ಎಂದು ಮಾಹಿತಿ ನೀಡುತ್ತಾರೆ ಸ್ಥಳೀಯರಾದ ರಾಮಕೃಷ್ಣ.
ಹೀಗೆ ಮಾಜಿ ರಾಷ್ಟ್ರಪತಿ ವಿವಿ ಗಿರಿಯವರಿಗೆ ಸೇರಿದ ಮನೆ ನೆಲಸಮವಾಗಿ ಇತಿಹಾಸದ ಪುಟ ಸೇರಿದೆ.












Click it and Unblock the Notifications