ಲೋಕಸಭೆ ಚುನಾವಣೆ ನಂತರ ಕರ್ನಾಟಕ ಕಾಂಗ್ರೆಸ್ ವಿಭಜನೆ: ಮಾಜಿ ಸಿಎಂ ಭವಿಷ್ಯ
ಲೋಕಸಭೆ ಚುನಾವಣೆಯ ನಂತರ ಕರ್ನಾಟಕ ಕಾಂಗ್ರೆಸ್ ವಿಭಜನೆಯಾಗಲಿದೆ. ಪಕ್ಷಕ್ಕೆ ಸೂಕ್ತ ಅಭ್ಯರ್ಥಿಗಳು ಸಿಗದ ಕಾರಣ, ಸಚಿವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕರ್ನಾಟಕದಲ್ಲಿ ಮೂರು ತಿಂಗಳ ಒಳಗೆ ಕಾಂಗ್ರೆಸ್ ಎರಡು ಭಾಗವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವಂಶರಾಜಕಾರಣ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಇದೆ. ಆದರೆ, ಈ ಬಾರಿ ಸಚಿವರ ಸಂಬಂಧಿಕರಿಗೆ ಹೆಚ್ಚಿನ ಟಿಕೆಟ್ ನೀಡಿರುವುದಕ್ಕೆ ಬೇರೆಯದೇ ಕಾರಣವಿದೆ ಎಂದು ಬೊಮ್ಮಾಯಿ ಹೇಳಿದರು.
ಸಚಿವರಿಗೆ ಗೆಲ್ಲುವ ವಿಶ್ವಾಸ ಇಲ್ಲ
ಕಾಂಗ್ರೆಸ್ ಹೈಕಮಾಂಡ್ ಹತ್ತು ಸಚಿವರನ್ನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿದೆ. ಆದರೆ, ಅವರಿಗೆ ತಾವು ಗೆಲ್ಲುವ ಬಗ್ಗೆ ವಿಶ್ವಾಸವಿರಲಿಲ್ಲ. ಸೂಕ್ತ ಅಭ್ಯರ್ಥಿಗಳನ್ನು ಸೂಚಿಸುವಂತೆ ಕೇಂದ್ರದ ನಾಯಕರು ಸಚಿವರನ್ನು ಕೇಳಿದಾಗ ಅವರು ತಮ್ಮ ಪುತ್ರರು, ಪುತ್ರಿಯರು, ಅಳಿಯ, ಸೊಸೆ ಮತ್ತು ಸಹೋದರನಿಗೆ ಟಿಕೆಟ್ ಕೊಡಿಸಿದ್ದಾರೆ. ಮತದಾರರು ಪ್ರಧಾನಿ ಮೋದಿಗೆ ಮತ ಹಾಕಲು ನಿರ್ಧರಿಸಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.
ನಾಮಪತ್ರ ಸಲ್ಲಿಕೆ ಯಾವಾಗ?
ಲೋಕಸಭೆ ಅಭ್ಯರ್ಥಿಯಾಗಿ ಯಾವಾಗ ನಾಮಪತ್ರ ಸಲ್ಲಿಸಬೇಕು ಎಂಬುದನ್ನು ಮಾ. 31ರಂದು ನಿರ್ಧರಿಸುತ್ತೇನೆ. ಪಕ್ಷದ ಸ್ಟಾರ್ ಪ್ರಚಾರಕರೂ ಆಗಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಹಾಗೂ ಎರಡನೇ ಹಂತದ ಮತದಾನದಲ್ಲೂ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.
ಚುನಾವಣೆ ಬಂದ್ರೆ ಸಾಕು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಆಸ್ಪತ್ರೆ ಸೇರುತ್ತಾರೆ ಎಂಬ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ರಮೇಶ್ ಬಂಡಿಸಿದ್ದೇಗೌಡ ವೈದ್ಯರಲ್ಲ, ಆರೋಗ್ಯ ವಿಚಾರವನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಚೆನ್ನೈನಲ್ಲಿ ಚಿಕಿತ್ಸೆ ಪಡೆದಿರುವುದಕ್ಕೆ ಪುರಾವೆ ಇದೆ. ರಾಜಕೀಯದಲ್ಲಿ ಹೋರಾಟ ರಾಜಕೀಯ ನೆಲೆಗಟ್ಟಿನಲ್ಲಿ ನಡೆಯಬೇಕೇ ಹೊರತು ವೈಯಕ್ತಿಕ ನೆಲೆಯಲ್ಲಿ ಅಲ್ಲ. ಕುಮಾರಸ್ವಾಮಿ ಅವರೊಂದಿಗೆ ಶಾಸಕರು ಉತ್ತಮ ಸಂಬಂಧ ಹೊಂದಿದ್ದು, ವೈಯಕ್ತಿಕ ವಿಚಾರಗಳನ್ನು ರಾಜಕೀಯಕ್ಕೆ ತರಬಾರದು ಎಂದು ಕಿವಿಮಾತು ಹೇಳಿದರು.












Click it and Unblock the Notifications