Bengaluru: ಬೆಂಗಳೂರಿನಲ್ಲಿ ಅಂಗಾಂಗ ದಾನದ ಮೂಲಕ ಆರು ಜೀವಗಳನ್ನು ಉಳಿಸಿದ ವಿದೇಶಿ ಮಹಿಳೆ
ಬೆಂಗಳೂರು, ಮೇ.19: ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿಧನರಾದ ವಿದೇಶಿ ಪ್ರವಾಸಿಗರೊಬ್ಬರ ಅಂಗಾಂಗಗಳನ್ನು ಅವರ ಕುಟುಂಬ ದಾನ ಮಾಡಿದ್ದು, ಈ ಮೂಲಕ ಕಸಿ ಅಗತ್ಯವಿರುವ ಆರು ಜನರ ಜೀವ ಉಳಿಸಲು ಸಹಾಯಕವಾಗಿದೆ ಎಂದು ಸ್ಪರ್ಶ ಆಸ್ಪತ್ರೆ ಗುರುವಾರ ತಿಳಿಸಿದೆ.
ಗೌಪ್ಯತೆಯ ಕಾರಣದಿಂದ ಪ್ರವಾಸಿಗರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಪ್ರವಾಸಿ 40 ವರ್ಷದವರಾಗಿದ್ದು, ಮೇ 15 ರಂದು ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪರ್ಶ ಆಸ್ಪತ್ರೆ ತಿಳಿಸಿದೆ.

"ಆಕೆಯ ಯಕೃತ್ತು (ಲಿವರ್) ಮತ್ತು ಎಡ ಮೂತ್ರಪಿಂಡವನ್ನು ಆರ್‌ಆರ್‌ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದ್ದು, ಇನ್ನೊಂದು ಮೂತ್ರಪಿಂಡವನ್ನು ಐಎನ್‌ಯು ಆಸ್ಪತ್ರೆಗೆ ಕಳುಹಿಸಲಾಗಿದೆ. ಹೆಚ್ಚುವರಿಯಾಗಿ, ಅವರ ಹೃದಯ ಕವಾಟಗಳನ್ನು ನಾರಾಯಣ ಹೃದಯಾಲಯಕ್ಕೆ, ಕಾರ್ನಿಯಾಗಳನ್ನು ನಾರಾಯಣ ನೇತ್ರಾಲಯಕ್ಕೆ ಮತ್ತು ಚರ್ಮವನ್ನು ವಿಕ್ಟೋರಿಯಾ ಸ್ಕಿನ್ ಬ್ಯಾಂಕ್‌ಗೆ ಕಳುಹಿಸಲಾಗಿದೆ" ಎಂದು ಸ್ಪರ್ಶ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಪರ್ಶ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಗ ಮಾತನಾಡಿ, "ಅಂಗಾಂಗ ದಾನಕ್ಕೆ ಜೀವನವನ್ನು ಬದಲಾಯಿಸುವ ಶಕ್ತಿ ಇದೆ. ಅಂಗಾಂಗಗಳನ್ನು ದಾನ ಮಾಡುವ ಒಂದು ನಿರ್ಧಾರವು ಅನೇಕರ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಈ ವಾರ, ದುರದೃಷ್ಟವಶಾತ್ ಭಾರತಕ್ಕೆ ಭೇಟಿಯ ವೇಳೆ ನಿಧನರಾದ ವಿದೇಶಿ ಪ್ರವಾಸಿಗರೊಬ್ಬರ ಅಂಗಾಂಗಗಳನ್ನು ದಾನ ಮಾಡಲಾಗಿದೆ" ಎಂದಿದ್ದಾರೆ.

"ಈ ಪ್ರಮುಖ ಅಂಗಗಳು ಬಹು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಈ ರೀತಿಯ ನಿಸ್ವಾರ್ಥ ಸೇವೆಗಳು ರಾಷ್ಟ್ರೀಯ ಗಡಿಗಳನ್ನು ಅಥವಾ ಜಾತಿ ಮತ್ತು ಧರ್ಮವನ್ನು ಹೇಗೆ ಮೀರುತ್ತವೆ ಎಂಬುದನ್ನು ನೋಡುವುದು ಗಮನಾರ್ಹವಾಗಿದೆ. ಕುಟುಂಬದವರ ಈ ನಿರ್ಧಾರಕ್ಕೆ ನಾವು ಗೌರವಿಸುತ್ತೇವೆ. ವಿಶೇಷವಾಗಿ ಈ ದುಃಖದ ಸಮಯದಲ್ಲಿಯೂ ಅವರ ಈ ನಿರ್ಧಾರ ಹಲವು ಜೀವಗಳನ್ನು ಉಳಿಸಿದೆ" ಎಂದು ಕುಟುಂಬಕ್ಕೆ ಧನ್ಯವಾದ ಹೇಳಿದ್ದಾರೆ.
ಅಂಗ ದಾನ ನಿಯಮಗಳ ಪ್ರಕಾರ, ಕರ್ನಾಟಕದಲ್ಲಿ ಶವಗಳ ಅಂಗಾಂಗ ದಾನವನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆಯಾದ SOTTO (ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ಅಧಿಕಾರಿಗಳು ಅಂಗಾಂಗ ದಾನದ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು, ಪ್ರವಾಸಿಗರ ಕುಟುಂಬ ಸದಸ್ಯರಿಂದ ಲಿಖಿತ ಒಪ್ಪಿಗೆಯನ್ನು ಪಡೆದ ಬಳಿಕ ಇತರರಿಗೆ ಅಂಗಾಂಗ ದಾನ ಮಾಡಿದ್ದಾರೆ. ನಿರೀಕ್ಷಣಾ ಪಟ್ಟಿಯಂತೆ ಸ್ವೀಕರಿಸುವವರನ್ನು ಆಯ್ಕೆ ಮಾಡಿ ಅಂಗಾಂಗಗಳನ್ನು ಕಸಿ ಮಾಡಲಾಗಿದೆ.












Click it and Unblock the Notifications