ಬೆಂಗಳೂರಿನ ಈ ಪ್ರದೇಶಗಳಲ್ಲಿ ಫುಟ್‌ಪಾತ್ ಒತ್ತುವರಿ ಕಾರ್ಯಾಚರಣೆ
ಬೆಂಗಳೂರು, ಡಿಸೆಂಬರ್, 08: ಬಿಬಿಎಂಪಿ ನಗರದಲ್ಲಿ ಆಗಾಗ ತೆರವು ಕಾರ್ಯಚರಣೆ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ನಗರದ ಈ ಮೂರು ಭಾಗಗಳಲ್ಲಿ ಫುಟ್‌ಪಾತ್ ಅತಿಕ್ರಮಣ ಹಾಗೂ ಅನಧಿಕೃತ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ನಡೆಸಿದೆ. ಹಾಗಾದರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಆಯಾ ವಲಯಗಳಲ್ಲಿನ ಪಾದಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸಲಾಯಿತು. ಬಳಿಕ ಅತಿಕ್ರಮಣದಿಂದ ಪಾದಚಾರಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಗಮನಿಸಲಾಯಿತು. ಈ ವೇಳೆ ಅನಧಿಕೃತ ಕೇಬಲ್‌ಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವುದಲ್ಲದೆ, ಸಾರ್ವಜನಿಕರಿಗೆ ಅಡ್ಡಿಯಾಗುತ್ತಿವೆ ಎಂದು ನಿವಾಸಿಗಳು ಆರೋಪ ಮಾಡಿದ್ದರು ಎಂದು ಕನ್ನಡ ಪ್ರಭ ವರದಿ ಮಾಡಿದೆ.

ಬಳಿಕ ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರ ನಿರ್ದೇಶನಗಳನ್ನು ಅನುಸರಿಸಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು. ದಕ್ಷಿಣ ವಲಯದ ಜಯನಗರ 1ನೇ ಬ್ಲಾಕ್‌ನ 3ನೇ ಅಡ್ಡರಸ್ತೆ, ಲಕ್ಕಸಂದ್ರ ವಾರ್ಡ್‌ನ 16ನೇ ಅಡ್ಡ ರಸ್ತೆ ಹಾಗೂ ರಾಜರಾಜೇಶ್ವರಿನಗರ ವಲಯದ ನಾಗರಭಾವಿ 2ನೇ ಹಂತದ 6ನೇ ಅಡ್ಡ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು ಎಂದು ತಿಳಿದುಬಂದಿದೆ.
ಅಲ್ಲದೆ, ಮಹದೇವಪುರ ವಲಯದ ಹಳೇ ವಿಮಾನ ನಿಲ್ದಾಣ ರಸ್ತೆ, ಮಾರತ್ತಹಳ್ಳಿ ಸೇತುವೆ ಮುಖ್ಯರಸ್ತೆಯಲ್ಲಿನ ಅತಿಕ್ರಮಣ ಹಾಗೂ ಅನಧಿಕೃತ ಓವರ್‌ಹೆಡ್ ಕೇಬಲ್‌ಗಳನ್ನು ತೆರವುಗೊಳಿಸಲಾಯಿತು. ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರ ನಿರ್ದೇಶನದಂತೆ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವು ಮಾಡಿದ್ದಾರೆ. ಪಾದಚಾರಿ ಮಾರ್ಗಗಳಲ್ಲಿ ಶಾಶ್ವತ ಪೆಟ್ಟಿಗೆಗಳನ್ನು ತೆರವು ಮಾಡಿ, ಮತ್ತೆ ವ್ಯಾಪಾರ ಮಾಡದಂತೆ ಕಟ್ಟೆಚ್ಚರ ನೀಡಲಾಗುತ್ತಿದೆ ಎಂದು ಪಾಲಿಕೆ ಇಂಜಿನಿಯರ್ ಹೇಳಿದ್ದಾರೆ ಎಂದು ವರದಿ ಮಾಡಿದೆ.
ಕಾಮಗಾರಿಗೆ ಸಂಪುಟ ಒಪ್ಪಿಗೆ: ನಮ್ಮ ಮೆಟ್ರೋ ರೈಲು ಬೆಂಗಳೂರಿನ ಜೀನವಾಡಿ ಸಾರಿಗೆಗಳಲ್ಲೊಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನೇ ಅಲಂಬಿಸಿದ್ದಾರೆ. ಈ ಮೂಲಕ ಮೆಟ್ರೋ ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಿದೆ. ಮತ್ತೊಂದೆಡೆ ಪ್ರಯಾಣಿಕರ ಬೇಡಿಕೆ ಮೇರೆಗೆ ಮೆಟ್ರೋ ಜಾಲ ಇನ್ನೂ ವಿಸ್ತರಣೆಯಾಗುತ್ತಲಿದೆ. ಹಾಗೆಯೇ ಇದೀಗ ಈ ಮಾರ್ಗದ ಮೆಟ್ರೋ ಕಾಮಗಾರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಮೆಟ್ರೋ ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಸರ್ಜಾಪುರ-ಹೆಬ್ಬಾಳದವರೆಗೆ (ಕೆಂಪು ಮಾರ್ಗ) ಉದ್ದೇಶಿಸಿರುವ 36.59 ಕಿಲೋ ಮೀಟರ್ ಉದ್ದದ ಮೆಟ್ರೋ ಕಾಮಗಾರಿ ಯೋಜನಾ ಪೂರ್ವ ಸಿದ್ಧತೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಸರ್ಜಾಪುರ-ಹೆಬ್ಬಾಳದವರೆಗೆ 36.59ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು 28,405 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 17 ಮೆಟ್ರೋ ನಿಲ್ದಾಣ ಒಳಗೊಂಡ 22.14 ಕಿ.ಮೀ. ಎಲಿವೇಟೆಡ್ ಮಾರ್ಗ ಹಾಗೂ 11 ನಿಲ್ದಾಣ ಒಳಗೊಂಡ 14.45 ಕಿ.ಮೀ ಸುರಂಗ ಮಾರ್ಗದ ಕಾಮಗಾರಿ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications