ಬೆಂಗಳೂರು: ಕ್ಲಾರೆನ್ಸ್ ಹೈಸ್ಕೂಲ್‌ನ 215 ವಿದ್ಯಾರ್ಥಿಗಳಲ್ಲಿ ಫ್ಲೂ ಲಕ್ಷಣ ಪತ್ತೆ; H1N1 ವದಂತಿ ತಳ್ಳಿಹಾಕಿದ GBA
ಬೆಂಗಳೂರು: ನಗರದ ರಿಚರ್ಡ್ಸ್ ಟೌನ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಫ್ಲೂ ಸೋಂಕಿನ ಭೀತಿ ಎದುರಾಗಿದೆ. ಶಾಲೆಯ ಸುಮಾರು 215 ವಿದ್ಯಾರ್ಥಿಗಳಲ್ಲಿ ಫ್ಲೂ ಲಕ್ಷಣಗಳು ಕಂಡುಬಂದಿದ್ದು, ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಉತ್ತರ ವಲಯ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಶಾಲೆಯಲ್ಲಿ ಎಚ್1ಎನ್1 ಸೋಂಕು ಹರಡುತ್ತಿದೆ ಎಂಬ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದವು. ಆದರೆ, ಇದು ಕೇವಲ ಸಾಮಾನ್ಯ ಫ್ಲೂ ಆಗಿದ್ದು, ಎಚ್1ಎನ್1 ಸೋಂಕು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಎಚ್1ಎನ್1 ವದಂತಿಗೆ ಅಧಿಕಾರಿಗಳ ಸ್ಪಷ್ಟನೆ
ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಎಚ್1ಎನ್1 ಸೋಂಕು ಹರಡಿದೆ ಎಂಬ ಸುದ್ದಿ ಪೋಷಕರಲ್ಲಿ ಭಯ ಹುಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಗೂ ನ್ಯೂ ಬಾಗಲೂರು ಲೇಔಟ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ತಂಡ ಗುರುವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಪರಿಶೀಲನೆಯ ಬಳಿಕ ಮಾತನಾಡಿದ ಅಧಿಕಾರಿಗಳು, "ಶಾಲೆಯಲ್ಲಿ ಒಟ್ಟು 215 ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಫ್ಲೂ ಸೋಂಕಿನ ಲಕ್ಷಣಗಳು ಮಾತ್ರ ಕಂಡುಬಂದಿವೆ. ಗುರುವಾರದ ತಪಾಸಣೆಯಲ್ಲಿ ಯಾವುದೇ ಹೊಸ ಎಚ್1ಎನ್1 ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು" ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಶಾಲೆಯಲ್ಲಿ ಆರೋಗ್ಯ ನಿಗಾವಣೆಯನ್ನ ತೀವ್ರಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಮತ್ತು ಹಾಜರಾತಿಯ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ. ಶಾಲಾ ಆಡಳಿತ ಮಂಡಳಿ ಒದಗಿಸಿರುವ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಒಟ್ಟು 1,729 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ 139 ಶಾಲಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುವಾರದಂದು 1,599 ವಿದ್ಯಾರ್ಥಿಗಳು ಹಾಜರಾಗಿದ್ದರೆ, 269 ವಿದ್ಯಾರ್ಥಿಗಳು ಗೈರಾಗಿದ್ದರು. ಜ್ವರ, ಕೆಮ್ಮು, ಶೀತ ಅಥವಾ ಉಸಿರಾಟದ ತೊಂದರೆ ಇರುವ ಮಕ್ಕಳನ್ನ ಪ್ರತ್ಯೇಕವಾಗಿ ಗಮನಿಸಲಾಗುತ್ತಿದ್ದು, ಅವರಿಗೆ ಸೂಕ್ತ ವೈದ್ಯಕೀಯ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ.
ಶಾಲಾ ಆಡಳಿತಕ್ಕೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ
ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ಅಂತಹ ಪ್ರಕರಣಗಳನ್ನ ಪ್ರತಿದಿನವೂ ಕಡ್ಡಾಯವಾಗಿ ಆರೋಗ್ಯ ವಿಭಾಗಕ್ಕೆ ವರದಿ ಮಾಡುವಂತೆ ಪಾಲಿಕೆ ಅಧಿಕಾರಿಗಳು ಶಾಲಾ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದರ ಜೊತೆಗೆ, ಶಾಲೆಯ ಆವರಣದಲ್ಲಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸರಿಯಾದ ರೀತಿಯಲ್ಲಿ ಕೈತೊಳೆಯುವ ವಿಧಾನವನ್ನ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದ್ದು, ಕೈತೊಳೆಯುವ ಸ್ಥಳಗಳಲ್ಲಿ ಜಾಗೃತಿ ಪೋಸ್ಟರ್‌ಗಳನ್ನ ಹಾಕಲಾಗಿದೆ. ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಬಳಸುವಂತೆ ಹಾಗೂ ಉಸಿರಾಟದ ಶಿಷ್ಟಾಚಾರವನ್ನ ಪಾಲಿಸುವಂತೆ ಸೂಚಿಸಲಾಗಿದೆ. ಫ್ಲೂ ನಿಯಂತ್ರಣದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (ಎಸ್‌ಒಪಿ) ಅನ್ವಯ ಸೆಪ್ಟೆಂಬರ್ ಮೊದಲ ವಾರದವರೆಗೂ ಶಾಲೆಯಲ್ಲಿ ಆರೋಗ್ಯ ನಿಗಾವಣೆ ಮುಂದುವರಿಯಲಿದೆ.
ವದಂತಿಗೆ ಕಿವಿಗೊಡದಿರಲು ಸಾರ್ವಜನಿಕರಿಗೆ ಆಯುಕ್ತರ ಮನವಿ
ಉತ್ತರ ಪಾಲಿಕೆ ಆಯುಕ್ತರಾದ ಪಿ. ಸುನಿಲ್‌ಕುಮಾರ್ ಅವರು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದು, "ನಾಗರಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಕೇವಲ ಆರೋಗ್ಯ ಇಲಾಖೆಯಿಂದ ಬಿಡುಗಡೆಯಾಗುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು. ಫ್ಲೂ ಸೋಂಕಿನ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ. ಕೇವಲ ವೈಯಕ್ತಿಕ ಸ್ವಚ್ಛತೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಪಾಲಿಕೆಯ ಆರೋಗ್ಯ ವಿಭಾಗದ ಕಾರ್ಯಾಚರಣೆಗೆ ಎಲ್ಲರೂ ಕೈಜೋಡಿಸಬೇಕು" ಎಂದು ಮನವಿ ಮಾಡಿದ್ದಾರೆ.


Click it and Unblock the Notifications
