Shravana Shanivara 2023: ಗೋವಿಂದಾ.. ಗೋವಿಂದಾ..ಭಕ್ತಿಭಾವದಲ್ಲಿ ಮಿಂದೆದ್ದು ಶ್ರಾವಣ ಮಾಸ ಬರ ಮಾಡಿಕೊಂಡ ಭಕ್ತ ಗಣ
ಬೆಂಗಳೂರು, ಆಗಸ್ಟ್ 19: ಈಗಷ್ಟೇ ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗಿದೆ, ಶ್ರಾವಣ ಮಾಸದ ಮೊದಲ ಶನಿವಾರವಾದ ಇಂದು (ಆ19) ಸಿಲಿಕಾನ್ ಸಿಟಿಯಲ್ಲಿ ಗೋವಿಂದನ ನಾಮಸ್ಮರಣೆ ಮಾರ್ಧನಿಸಿತ್ತು. ಬೆಳ್ಳಂಬೆಳಗ್ಗೆ ಶುಚಿಯಾಗಿ ದೇಗುಲಗಳಿಗೆ ಎಂಟ್ರಿ ಕೊಟ್ಟ ಭಕ್ತರು ಗೋವಿಂದನ ದರ್ಶನ ಪಡೆದು ಪುನೀತರಾದರು. ಸಿಲಿಕಾನ್ ಸಿಟಿಯಲ್ಲಿ ಮೊದಲ ಶ್ರಾವಣ ಶನಿವಾರದ ಸಂಭ್ರಮ ಹೇಗಿತ್ತು ಗೊತ್ತಾ?
ಶ್ರಾವಣ ಮಾಸ ಅಂದರೆ ಹಿಂದೂಗಳಿಗೆ ಪವಿತ್ರ ಮಾಸ ಆರಂಭವಾದ ಸಂಭ್ರಮ. ಸಾಲು ಸಾಲು ಹಬ್ಬಗಳಿಗೆ ನಾಂದಿ ಹಾಡುವ ಈ ಪವಿತ್ರ ಮಾಸದಲ್ಲಿ ವ್ರತ, ಪೂಜೆಗಳ ಜೊತೆಗೆ ಕಟ್ಟುನಿಟ್ಟಿನ ಆಚರಣೆಗಳನ್ನ ಅನುಸರಿಸಲಾಗುತ್ತೆ. ಸಿಲಿಕಾನ್ ಸಿಟಿಯಲ್ಲೂ ಕೂಡ ಶ್ರಾವಣ ಮಾಸದ ವ್ರತಗಳು ಆರಂಭವಾಗಿದ್ದು, ಮೊದಲ ಶ್ರಾವಣ ಶನಿವಾರವಾದ ಇಂದು ಮಲ್ಲೇಶ್ವರಂನ ಟಿಟಿಡಿ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡಿ ಗೋವಿಂದನ ದರ್ಶನ ಪಡೆದರು.

ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತ ಭಕ್ತರು, ತುಳಸಿ, ಮಲ್ಲಿಗೆ ಹೂವು ಹಿಡಿದು ಗೋವಿಂದನಿಗೆ ಜೈಕಾರ ಕೂಗುತ್ತಾ ಶ್ರಾವಣ ಮಾಸದ ವ್ರತದ ಆಚರಣೆಗೆ ಶಂಖನಾದ ಮೊಳಗಿಸಿದರು. ಇನ್ನು ಆಷಾಢದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಅನ್ನುವ ನಂವಿಕೆ ಇರುವುದರಿಂದ ಆಗ ನಿಂತುಹೋಗಿದ್ದ ಶುಭಕಾರ್ಯಗಳಿಗೆ ಶ್ರಾವಣ ಮಾಸದಲ್ಲಿ ಚಾಲನೆ ಸಿಗುತ್ತದೆ.
ಶ್ರಾವಣ ಶನಿವಾರಗಳಲ್ಲಿ ಗೋವಿಂದನ ಭಜನೆ ಮಾಡುತ್ತಾ, ಮಾಂಸಾಹಾರ ತ್ಯಜಿಸಿ ವಿಶೇಷ ವ್ರತಗಳನ್ನ ಆಚರಣೆ ಮಾಡುತ್ತಾರೆ. ಅದರಂತೆ ಇಂದು ಕೂಡ ಸಿಲಿಕಾನ್ ಸಿಟಿ ಜನರು ಬೆಳಗ್ಗೆಯೇ ಗೋವಿಂದನ ನಾಮಸ್ಮರಣೆ ಮೂಲಕ ಶ್ರಾವಣ ಮಾಸವನ್ನು ಬರಮಾಡಿಕೊಂಡರು.
ಇನ್ನು ಶ್ರಾವಣ ಮಾಸದಲ್ಲಿ ವಿಶೇಷವಾಗಿ ತಿರುಪತಿ ತಿಮ್ಮಪ್ಪ, ಗೋವಿಂದ ಅಂತಾ ಕರೆಯಲ್ಪಡುವ ಶ್ರೀಹರಿಯನ್ನ ಹೆಚ್ಚಾಗಿ ಜನರು ಪೂಜಿಸುವ ಪರಿಪಾಠವಿದೆ. ತಿರುಪತಿ ತಿಮ್ಮಪ್ಪನಿಗೆ ಪ್ರಿಯವಾದ ಈ ಪವಿತ್ರಮಾಸದಲ್ಲಿ ನೂರಾರು ಭಕ್ತರು ಪ್ರತಿ ಶನಿವಾರ ಗೋವಿಂದನ ಸ್ಮರಣೆ ಮಾಡಿ ಪೂಜೆ,ವ್ರತಗಳನ್ನ ಮಾಡುತ್ತಾರೆ.
ಕೆಲ ಜನರು ಶ್ರೀಹರಿಯ ಸೇವೆಗೆ ಅಂತಾನೇ ಹಲವು ದಿನಗಳ ವ್ರತ ಕೂಡ ಮಾಡಿ ಶ್ರಾವಣ ಮಾಸದ ಮಹತ್ವಕ್ಕೆ ಮತ್ತಷ್ಟು ಮೌಲ್ಯ ತುಂಬುತ್ತಾರೆ. ಅದೇನೇ ಇರಲಿ ಭಕ್ತಿ-ಭಾವಗಳ ಜೊತೆ ಜೊತೆಗೆ ಆರಂಭವಾದ ಪವಿತ್ರ ಶ್ರಾವಣ ಮಾಸಕ್ಕೆ ಸಿಲಿಕಾನ್ ಸಿಟಿ ಜನರು ಭಕ್ತಿಪೂರ್ವಕ ಸ್ವಾಗತ ಕೋರಿದ್ದಾರೆ.
ವೇಗವಾಗಿ ಪಾಶ್ಚಾತ್ಯ ನಾಗರೀಕತೆಯ ಪ್ರಭಾವಕ್ಕೆ ಒಳಗಾಗುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇನ್ನೂ ಕೂಡ ಪ್ರಕೃತಿಯ ಬದಲಾವಣೆಗಳಿಗೆ ದೈವರೂಪ ನೀಡಿ ಪೂಜಿಸುವ ಸಂಸ್ಕೃತಿ ಉಳಿದಿರೋದು ಮಾತ್ರ ನಿಜಕ್ಕೂ ಖುಷಿಯ ವಿಚಾರ.












Click it and Unblock the Notifications