Namma Metro: ತುಮಕೂರಿಗೆ ಮೆಟ್ರೋ ವಿಸ್ತರಣೆ: ಡಿಪಿಆರ್ ತಯಾರಿಕೆಗೆ ಕಂಪನಿ ಅಂತಿಮ, 5 ತಿಂಗಳು ಗಡುವು
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ಮಾದಾವರದಿಂದ ತುಮಕೂರುವರೆಗೆ ವಿಸ್ತರಿಸುವ ಯೋಜನೆಯು ಮಹತ್ವದ ಹಂತ ತಲುಪಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಯೋಜನೆಯ ವಿಸ್ತೃತ ಯೋಜನಾ ವರದಿ (DPR) ತಯಾರಿಕೆಯ ಕಂಪನಿಯನ್ನು ಅಂತಿಮಗೊಳಿಸಿದೆ. ಒಟ್ಟು 1.26 ಕೋಟಿ ರೂಪಾಯಿಗೆ ಡಿಪಿಆರ್ ತಯಾರಿಸುವ ಜವಾಬ್ದಾರಿಯನ್ನು ಆರ್ವೀ ಇಂಜಿನಿಯರಿಂಗ್ ಕನ್‌ಸಲ್ಟೆಂಟ್ಸ್ (Aarvee Engineering Consultants) ಕಂಪನಿ ಪಡೆದಿದೆ.
ಬೆಂಗಳೂರು ಮೆಟ್ರೋ (Bengaluru Metro) ಯೋಜನೆಯನ್ನು ತುಮಕೂರಿಗೆ ವಿಸ್ತರಣೆಗೆ ಕೆಲವು ವಿಪಕ್ಷ ನಾಯಕರು ಅಪಸ್ವರ ಎತ್ತಿದ್ದರು. ಇದರ ಬೆನ್ನಲ್ಲೆ ಯೋಜನೆಗೆ ಡಿಪಿಆರ್ ಟೆಂಡರ್ ಅನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ ಬೆಂಗಳೂರಿನಿಂದ ಅಂತರ್ ಜಿಲ್ಲೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಮೊದಲ ಯೋಜನೆಗೆ ವೇಗ ಸಿಕ್ಕಂತಾಗಿದೆ. ಇದರಿಂದ ತುಮಕೂರು-ಬೆಂಗಳೂರು ಮಧ್ಯ ಭಾಗದ ನಿವಾಸಿಗಳಿಗೆ ಅನುಕೂಲವಾಗಲಿದೆ. ಸಾರಿಗೆ ಸಂಪರ್ಕ ಸುಧಾರಿಸಲಿದೆ.

ಮುಂದಿನ 05 ತಿಂಗಳಲ್ಲಿ ಮಾದಾವರ-ತುಮಕೂರು ಮೆಟ್ರೋ ಡಿಪಿಆರ್ ಸಿದ್ದಪಡಿಸಿ ವರದಿ ನೀಡುವಂತೆ ಬಿಎಂಆರ್‌ಸಿಎಲ್ ಗಡುವು ನೀಡಿದೆ. ಮಾದಾವರದಿಂದ ತುಮಕೂರು ವರೆಗೆ 59 ಕಿಲೋ ಮಿಟರ್ ಇದೆ. ನೆಲಮಂಗಲ, ದಾಬಾಸ್‌ಪೇಟೆ, ಕ್ಯಾತಸಂದ್ರ ಮೂಲಕ ತುಮಕೂರು ತಲುಪುವ ಮೆಟ್ರೋ ಹಸಿರು ಮಾರ್ಗ ಇದಾಗಿದೆ. ಇದರ ಡಿಪಿಆರ್ ಸಿದ್ಧಪಡಿಸಲು ಕಳೆದ ನವೆಂಬರ್ 20 ರಂದು ಟೆಂಡರ್ ಆಹ್ವಾನಿಸಿ ಡಿಸೆಂಬರ್ 16ರಂದು ಬಿಡ್‌ಗೆ ತೆರೆಯಲಾಗಿತ್ತು. ಇದರಲ್ಲಿ ಪಾಲ್ಗೊಂಡ ಆರವೀ ಇಂಜಿನಿಯರ್ ಕಂಪನಿಯು 1,26,48,550 ಬಿಡ್ ಕೂಗಿ ಟೆಂಡರ್ ಅನ್ನು ತನ್ನದಾಗಿಸಿಕೊಂಡಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಡಿಪಿಅರ್ ಬಳಿಕ ಮುಂದೇನು?
ಡಿಪಿಆರ್ ಸಿದ್ದಪಡಿಸುವ ಕಂಪನಿಯು ಈ ಐದು ತಿಂಗಳಲ್ಲಿ ಬೆಂಗಳೂರಿನ ಮಾದಾವರಿಂದ ತುಮಕೂರುವರೆಗಿನ ಮಾರ್ಗದಲ್ಲಿ ಸ್ಥಳ ಸಮೀಕ್ಷೆ, ಪರಿಸರ, ಭೂಮಿಸ್ವಾಧೀನ ಪ್ರದೇಶಗಳ ಪರಿಶೀಲನೆ, ತಾಂತ್ರಿಕ ಅಂಶಗಳನ್ನು ಗಮನಿಸಿ ವರದಿ ಸಿದ್ಧಪಡಿಸುತ್ತದೆ. ಅದು ಮುಂದಿನ ಐದು ತಿಂಗಳಲ್ಲಿ ಸಲ್ಲಿಕೆ ಆಗುತ್ತಿದ್ದಂತೆ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. ಅಲ್ಲಿಂದ ಒಪ್ಪಿಗೆ ದೊರೆತ ಬಳಿಕ ಕಾಮಗಾರಿ ಗುತ್ತಿಗೆಗೆ ಟೆಂಡರ್, ಭೂಸ್ವಾಧೀನ ಸೇರಿ ಹಲವು ಪ್ರಕ್ರಿಯೆಗಳು ಶುರುವಾಗಲಿವೆ. ನಂತರವೇ ಅಂದಾಜು ವೆಚ್ಚ, ಕಾಮಗಾರಿ ಪೂರ್ಣಗೊಳ್ಳುವ ಡೆಡ್‌ಲೈನ್ ಬಗ್ಗೆ ಮಾಹಿತಿ ಸಿಗಲಿದೆ.
ತುಮಕೂರುವರೆಗೆ ಮೆಟ್ರೋ ಯೋಜನೆ ಕುರಿತು..
ಬೆಂಗಳೂರಿನಿಂದ ತುಮಕೂರುವರೆಗೆ ರೈಲ್ವೆ ಹಳಿ, ರಸ್ತೆ ಅಗಲೀಕರಣಗೊಳಿಸಲಾಗುತ್ತಿದೆ. ಆ ಭಾಗದಿಂದ ಬೆಂಗಳೂರಿಗೆ ಬರುವವರು ಮತ್ತು ಹೋಗುವವರ ಸಂಖ್ಯೆ ಹೆಚ್ಚು. ಹೀಗಾಗಿ ಮಾದಾವರದಿಂದ ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ ಅಧಿಕಾರಿಗಳು ಸೂಚನೆ ಮೆರೆಗೆ ಕಾರ್ಯಸಾಧ್ಯತಾ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ರಾಜ್ಯ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತು. ಬಳಿಕ ಬಿಎಂಆರ್‌ಸಿಎಲ್ ಡಿಪಿಆರ್‌ಗೆ ಟೆಂಡರ್ ಆಹ್ವಾನಿಸಿತ್ತು.












Click it and Unblock the Notifications