ಬೆಂಗಳೂರಲ್ಲಿ ಪಟಾಕಿ ಸಿಡಿಸುವಾಗ ಗ್ಯಾಸ್ ಪೈಪ್‌ಲೈನ್‌ಗೆ ಡ್ಯಾಮೇಜ್, ಬೆಂಕಿ!
ಬೆಂಗಳೂರಲ್ಲಿ ದೀಪಾವಳಿ ಮುಗಿದರೂ, ದೀಪಾವಳಿ ಸಂಭ್ರಮ ಮುಂದುವರಿದಿದೆ. ಅಲ್ಲದೇ ಪಟಾಕಿ ಹೊಡೆಯುವುದು ಹಾಗೂ ಅದರಿಂದ ದುರಂತಗಳು ಸಂಭವಿಸುವುದು ಸಹ ಮುಂದುವರಿದಿದೆ. ಇದೀಗ ಬೆಂಗಳೂರಲ್ಲಿ ಪಟಾಕಿಯಿಂದ ಬಹುದೊಡ್ಡ ದುರಂತವೊಂದು ಕುದಲೆಳೆಯ ಅಂತರದಲ್ಲಿ ಮಿಸ್ ಆಗಿದೆ. ಬೆಂಗಳೂರಲ್ಲಿ ಪಟಾಕಿ ಹೊಡೆಯುವಾಗ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯಾಗಿದೆ. ಮುಂದೇನಾಯ್ತು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಲ್ಲಿ ಈ ಬಾರಿ ದೀಪಾವಳಿ ಹಲವು ದುರಂತಗಳನ್ನೇ ಸೃಷ್ಟಿ ಮಾಡಿದೆ. ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಹಾಗೂ ಸರ್ಕಾರ ನೀಡಿದ ಯಾವುದೇ ಮಾರ್ಗಸೂಚಿಗಳು ಸಹ ಪಾಲನೆಯಾಗಿಲ್ಲ. ಇದರ ನಡುವೆ ಗೇಲ್ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯಾಗಿರುವುದು ವರದಿಯಾಗಿದೆ.

ಹೌದು, ವೈಟ್‌ಫೀಲ್ಡ್‌ನ ಅಥಾಶ್ರೀ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಈ ಭಾಗದಲ್ಲಿ ಪಟಾಕಿ ಹೊಡೆಯುವಾಗ ಗೇಲ್ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಹಾಗೂ ಇಲ್ಲಿನ ಭದ್ರತಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ವಿವಿಧ ಭಾಗದಲ್ಲಿ ಗೇಲ್ ಗ್ಯಾಸ್ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಈ ಪೈಪ್‌ಗಳನ್ನು ಅಳವಡಿಸುವಾಗಲೇ ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಗ್ಯಾಸ್ ಪೈಪ್‌ಲೈನ್ ಹಾದು ಹೋಗುವ ಜಾಗದಲ್ಲಿ ಎಚ್ಚೆರಿಕೆಯ ನಾಮಫಲಕಗಳನ್ನು ಅಳವಡಿಸಲಾಗಿದೆ. ಇದರ ಹೊರತಾಗಿಯೂ ಜನ ನಿರ್ಲಕ್ಷ್ಯ ಮಾಡುವುದು ಮುಂದುವರಿಸಿದ್ದಾರೆ.
ದೀಪಾವಳಿ ವೇಳೆ ಪಟಾಕಿ ಸಿಡಿಸುವಾಗ ಈ ದುರಂತ ನಡೆದಿದೆ. ಗ್ಯಾಸ್ ಪೈಪ್‌ಲೈನ್ ಹಾದು ಹೋಗುವ ಮಾರ್ಗದಲ್ಲಿ ಇಲ್ಲಿ ಪಟಾಕಿ ಸಿಡಿಸಬಾರದು ಎಂದು ಸ್ಪಷ್ಟವಾಗಿ ಬರೆದಿದ್ದರೂ, ಜನ ಕ್ಯಾರೇ ಎನ್ನುತ್ತಿಲ್ಲ.
ಕಾಗದದಲ್ಲೇ ಉಳಿದ ಪಟಾಕಿ ನಿಯಮ: ಇನ್ನು ಈ ದೀಪಾವಳಿ ಸಮಯದಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯು ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಆದರೆ, ಇದೆಲ್ಲ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಅಂದರೆ, ಈ ಮಾರ್ಗಸೂಚಿಗಳನ್ನು ಅನುಷ್ಠಾನ ಮಾಡುವುದರಲ್ಲಿ ಪಾಲಿಕೆ ಹಾಗೂ ಸರ್ಕಾರ ವಿಫಲವಾಗಿದೆ ಅಂತಲೇ ಹೇಳಲಾಗ್ತಿದೆ.
ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಬೇಕು. ರಾತ್ರಿ 8ರಿಂದ 10ರ ವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎನ್ನುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ, ಆ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗಿದೆ. ಪಟಾಕಿ ಹೊಡೆಯುವಾಗ ಹಲವರಿಗೆ ಗಾಯಗಳಾಗಿವೆ.
25ಕ್ಕೂ ಹೆಚ್ಚು ಜನರ ಕಣ್ಣಿಗೆ ಹಾನಿ: ದೀಪವಾಳಿ ಸಮಯದಲ್ಲಿ ಪಟಾಕಿ ದುರಂತವನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಿದ ಹೊರತಾಗಿಯೂ ಈ ಬಾರಿಯೂ ಪಟಾಕಿ ದುರಂತಗಳು ಮುಂದುವರಿದಿವೆ. ಈ ಬಾರಿ ಪಟಾಕಿ ದುರಂತದಿಂದಲೇ 25ಕ್ಕೂ ಹೆಚ್ಚು ಜನರ ಕಣ್ಣಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಅಲ್ಲದೇ ನಿರಂತರವಾಗಿ ಪಟಾಕಿ ಸಿಡಿಸುತ್ತಿರುವುದರಿಂದಾಗಿ ಬೆಂಗಳೂರಲ್ಲಿ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಬೆಂಗಳೂರಲ್ಲಿ ಪಟಾಕಿಯಿಂದ ರಸ್ತೆಗಳಲ್ಲಿ ಕಸದ ರಾಶಿ ತುಂಬಿಕೊಂಡಿದ್ದು, ಈ ಕಸ ವಿಲೇವಾರಿಗೆ ಪೌರಕಾರ್ಮಿಕರು ಪರದಾಡುತ್ತಿದ್ದಾರೆ.












Click it and Unblock the Notifications