ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ
Victoria Hospital Fire Accident: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಇಂದು (ಜುಲೈ 1) ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಐಸಿಯುನಲ್ಲಿದ್ದ 5 ಮಂದಿ ರೋಗಿಗಳು ಸೇರಿ ಒಟ್ಟು 26 ರೋಗಿಗಳನ್ನು ಸುರಕ್ಷಿತವಾಗಿ ತಕ್ಷಣವೇ ಬೇರೆ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಸ್ವಿಚ್ ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಈ ಅಗ್ನಿ ಅವಘಟ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ರೋಗಿಗಳನ್ನು ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಗ್ಗೆ 3 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ರಿಜಿಸ್ಟರ್ ಬುಕ್, ಬೆಡ್ ಎಲ್ಲಾ ಸುಟ್ಟು ಕರಕಲಾಗಿವೆ. ಫ್ರಿಡ್ಜ್‌ಗೆ ಬೆಂಕಿ ತಗುಲಿ ಸುಟ್ಟ ಗಾಯಗಳ ವಿಭಾಗದ ಗ್ರೌಂಡ್ ಫ್ಲೋರ್ ತುಂಬಾ ಬೆಂಕಿ ಆವರಿಸಿದೆ.
ಕಾಣಿಸಿಕೊಂಡ ತಕ್ಷಣ ರೋಗಿಗಳನ್ನ ಶಿಫ್ಟ್ ಮಾಡಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬೆಂಕಿ ಕಾಣಿಸಿಕೊಂಡ ಕಟ್ಟಡದ ಎಲ್ಲಾ ರೋಗಿಗಳನ್ನ ಹೆಚ್ ಬ್ಲಾಕ್‌ಗೆ ಶಿಫ್ಟ್ ಮಾಡಲಾಗಿದೆ. 14 ಪುರುಷರು, 5 ಮಹಿಳೆಯರು ಮತ್ತು 7 ಮಂದಿ ಮಕ್ಕಳು ಸೇರಿ ಒಟ್ಟು 26 ರೋಗಿಗಳನ್ನು ರವಾನೆ ಮಾಡಲಾಗಿದೆ.
ಕರ್ತವ್ಯದಲ್ಲಿದ್ದ ವೈದ್ಯರ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ವೈದ್ಯೆ ದಿವ್ಯಾ ನೇತೃತ್ವದ ತಂಡ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದರು. ಮುಂಜಾನೆ 3:30ರ ಸುಮಾರಿಗೆ ಡಾ.ದಿವ್ಯಾ ಮೊದಲ ಮಹಡಿಗೆ ಹೋಗಿದ್ದರು. ಈ ವೇಳೆ ಸೆಮಿನರ್ ರೂಂನಲ್ಲಿ ಹೊಗೆ ಕಾಣಿಸಿಕೊಂಡಿತ್ತು.
ಶಬ್ದ ಕೇಳಿ ಕೂಡಲೇ ಅಲರ್ಟ್ ಆದ ಅವರು ಮತ್ತು ಸಿಬ್ಬಂದಿ ಕೋಡ್ ರೆಡ್ ಅಲರ್ಟ್ ಮಾಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ತಕ್ಷಣ ಈ ಬಗ್ಗೆ ಸೂಪರಿಂಟೆಂಡೆಂಟ್‌ಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬೆಂಕಿ ನಂದಿಸುವ ಪ್ರಯತ್ನದ ಜೊತೆಗೆ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಗ್ನಿ ಶಾಮಕ ಸಿಬ್ಬಂದಿಗೆ ಹಾಗೂ ಪೊಲೀಸರಿಗೂ ತಿಳಿಸಿದ್ದಾರೆ.
10 ಕಾರ್ಮಿಕರ ಸಾವು: ಹೈದರಾಬಾದ್ ಬಳಿಯ ಪಾಶಮೈಲಾರಂನಲ್ಲಿರುವ ಕೈಗಾರಿಕಾ ಘಟಕದಲ್ಲಿ ಜೂನ್ 30ರಂದು ಸಂಭವಿಸಿದ ಬೃಹತ್ ರಿಯಾಕ್ಟರ್ ಸ್ಪೋಟದಲ್ಲಿ 10 ಕಾರ್ಮಿಕರು ಸಾವನ್ನಪ್ಪಿ,20 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿತ್ತು.
ಘಟನೆಯಲ್ಲಿ ಗಾಯಗೊಂಡಿರುವವರ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಂಗರೆಡ್ಡಿ ಜಿಲ್ಲೆಯ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ ಬೆಳಗ್ಗೆ 9ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಪೋಟದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸಿಗಾಚಿ ಕೆಮಿಕಲ್ಸ್ ಸಂಪೂರ್ಣ ಆವರಣ ಆವರಿಸಿಕೊಂಡಿತ್ತು. ಅಗ್ನಿ ನಿಯಂತ್ರಿಸಲು 11 ಅಗ್ನಿಶಾಮಕ ವಾಹನಗಳು ಆಗಮಿಸಿದ್ದವು.
ಪೊಲೀಸರು, ಅಗ್ನಿಶಾಮಕ ದಳ ಹಾಗೂ ಇತರ ಸಿಬ್ಬಂದಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಿದರು. ಗಾಯಾಳುಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.












Click it and Unblock the Notifications