ಸುಟ್ಟ ಕಾರಿನ ಕರಕಲು ಸತ್ಯ ಹೇಳಲು ಉಳಿದ ಒಂದೇ ಸಾಕ್ಷಿ.. ಅದೂ ಸುಟ್ಟ ಕ್ಯಾಮರಾ.!
ಬೆಂಗಳೂರು, ಫೆಬ್ರವರಿ 23: ಸುಟ್ಟು ಕರಕಲಾಗಿರುವ ನೂರಾರು ಕಾರುಗಳು... ''ಯಾವುದು ನನ್ನ ಕಾರು'' ಅಂತ ಕಣ್ಣೀರಿಡುತ್ತಾ, ಹುಡುಕುತ್ತಿರುವ ಜನ... ಈ ಮಧ್ಯೆ ತಮ್ಮ ಕಾರಿನ ಕಳೇಬರದ ಪಕ್ಕ ನಿಂತುಕೊಂಡು, ಬೆಂಕಿಗೆ ಆಹುತಿಯಾದ ಡಿ.ಎಸ್.ಎಲ್.ಆರ್ ಕ್ಯಾಮರಾವನ್ನು ಕೈಯಲ್ಲಿ ಇಟ್ಟುಕೊಂಡು ರೋಧಿಸುತ್ತಿದ್ದ ಯುವಕ.
ಆ ಯುವಕನ ಹೆಸರು ಸಂದೀಪ್. ಬೆಂಗಳೂರಿನ ಬಾಣಸವಾಡಿಯ ನಿವಾಸಿ. ಏರ್ ಶೋನಲ್ಲಿ ಲೋಹದ ಹಕ್ಕಿಗಳ ಹಾರಾಟವನ್ನು ಕಣ್ತುಂಬಿಕೊಳ್ಳಲು ಖುಷಿಯಿಂದ ಬಂದಿದ್ದ ಸಂದೀಪ್ ಕಂಗಳಲ್ಲಿ ನೀರು ತುಂಬಿತ್ತು. ಕನಸಿನ ಕಾರಿನ ಜೊತೆಗೆ ಜೀವನದ ಮಧುರ ಕ್ಷಣಗಳನ್ನು ಸೆರೆ ಹಿಡಿದಿದ್ದ ಇಷ್ಟದ ಕ್ಯಾಮರಾವನ್ನೂ ಕಳೆದುಕೊಂಡ ಸಂದೀಪ್ ಸಂಕಟ ಹೇಳತೀರದು.
ಏರ್ ಶೋಗೆ ಹೋಗಿ, ಅಲ್ಲಿ ಲೋಹದ ಹಕ್ಕಿಗಳ ಹಾರಾಟವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಬೇಕು ಅಂತ ಬಾಣಸವಾಡಿಯ ಸಂದೀಪ್ ಡಿ.ಎಸ್.ಎಲ್.ಆರ್ ಕ್ಯಾಮರಾವನ್ನೂ ಹೊತ್ತು ತಂದಿದ್ದರು. ಆದ್ರೆ, ಏರ್ ಶೋ ಒಳಗೆ ಡಿ.ಎಸ್.ಎಲ್.ಆರ್ ಕ್ಯಾಮರಾ ಬಿಡಲಿಲ್ಲ. ಬೇರೆ ದಾರಿಯಿಲ್ಲದೆ ಗೇಟ್ 5 ರಲ್ಲಿ ಪಾರ್ಕ್ ಮಾಡಲಾಗಿದ್ದ ತಮ್ಮ ಕಾರ್ ನಲ್ಲಿ ಸಂದೀಪ್ ಕ್ಯಾಮರಾವನ್ನೂ ಬಿಟ್ಟು ಬಂದಿದ್ದರು.
ಹಾಗೆ ಸಂದೀಪ್ ಒಳಗೆ ಬಂದು ಕೆಲವೇ ನಿಮಿಷಗಳು ಕಳೆದಿವೆ ಅಷ್ಟೇ... ಅಷ್ಟರಲ್ಲಿ ನೂರಾರು ಕಾರುಗಳು ಧಗಧಗನೆ ಉರಿಯಿತು. ಜೀವಮಾನದ ಕನಸಿನ ಕಾರು ಬೆಂಕಿಗಾಹುತಿಯಾದ ಆಘಾತದಿಂದ ಓಡೋಡಿ ಬಂದ ಸಂದೀಪ್ ಗೆ ಅಲ್ಲಿ ಮತ್ತೊಂದು ಶಾಕ್ ಕಾದಿತ್ತು. ಕಾರಿನ ಜೊತೆಗೆ ತಮ್ಮ ಜೀವನದ ಸವಿನೆನಪುಗಳನ್ನು ಸೆರೆಹಿಡಿದಿದ್ದ ಕ್ಯಾಮರಾ ಕೂಡ ಬೆಂಕಿಯ ಕೆನ್ನಾಲಿಗೆಗೆ ಆಹುತಿ ಆಗಿತ್ತು.
ಜೀವನದ ಮಧುರ ಕ್ಷಣಗಳೆಲ್ಲವೂ ಕಾರಿನೊಂದಿಗೆ ಒಂದೇ ಕ್ಷಣದಲ್ಲಿ ಸುಟ್ಟು ಹೋಗಿದ್ದಕ್ಕೆ ಸಂದೀಪ್ ಪಟ್ಟ ನೋವು ಅಷ್ಟಿಷ್ಟಲ್ಲ.

ಕರಾಳವಾದ ವಾರಾಂತ್ಯ
ಹರ್ಷದ ಕೂಳಿಗಾಗಿ ವರ್ಷದ ಕೂಳು ಕಳ್ಕೊಂಡ್ರು ಅಂತಾರಲ್ಲ ಹಾಗಾಯಿತು ಲೋಹದ ಹಕ್ಕಿಗಳ ಕಲರವವನ್ನು ಕಣ್ತುಂಬಿಕೊಳ್ಳಲು ಏರ್ ಶೋನಲ್ಲಿ ಇಂದು ಭಾಗವಹಿಸಿದವರ ಪರಿಸ್ಥಿತಿ. ಬಾನಂಗಳದಲ್ಲಿ ವಿಮಾನಗಳು ಬಿಡಿಸುವ ಚಿತ್ತಾರ ನೋಡುವ ಸಲುವಾಗಿಯೋ, ಮಕ್ಕಳ ಹಠಕ್ಕಾಗಿಯೋ, ವಾರಾಂತ್ಯ ಕಳೆಯುವ ಉದ್ದೇಶದಿಂದಲೋ ಇವತ್ತು ಯಲಹಂಕ ವಾಯುನೆಲೆಗೆ ಸಾಗರೋಪಾದಿಯಲ್ಲಿ ಜನಸಾಮಾನ್ಯರು ಆಗಮಿಸಿದ್ದರು.

ಯಾರೂ ಊಹಿಸದ ಅವಘಡ
ಬಹುಶಃ ಇಂಥದ್ದೊಂದು ದುರಂತ ಸಂಭವಿಸುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಸಿಗರೇಟ್ ಕಿಡಿಯಿಂದಲೋ, ಬಿಸಿಲ ಧಗೆಯಿಂದಲೋ, ಕಾರ್ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಲೋ... ಗೊತ್ತಿಲ್ಲ. ಒಟ್ನಲ್ಲಿ ಒಂದು ಸಣ್ಣ ಕಿಡಿ ಬೆಂಕಿಯಿಂದ ಗೇಟ್ 5 ನಲ್ಲಿದ್ದ 300 ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾದವು.

ಪೈಸೆ-ಪೈಸೆ ಕೂಡಿಟ್ಟು ಖರೀದಿಸಿರುವ ಕಾರು
ಕೆಲವರಿಗೆ ಕಾರು ಅಂದ್ರೆ ಕೇವಲ ಪ್ರಯಾಣ ಮಾಡುವ ಸಾಧನ ಆಗಿರಬಹುದು. ಆದ್ರೆ, ಪೈಸೆ-ಪೈಸೆಯನ್ನೂ ಕೂಡಿಟ್ಟು ಕಾರು ಖರೀದಿ ಮಾಡಿದ ಮಧ್ಯಮ ವರ್ಗದ ಕುಟುಂಬದವರಿಗೆ ಅದೇ ಜೀವ. ಎಷ್ಟೋ ಜನರಿಗೆ ಕಾರು ಅಂದ್ರೆ ಫ್ಯಾಮಿಲಿ ಮೆಂಬರ್ ಇದ್ದ ಹಾಗೆ. ಬೆಂಗಳೂರು ಅಂತಹ ಸಿಟಿಯಲ್ಲಿ ಕಾರನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಹಲವು ಕುಟುಂಬಗಳಿವೆ. ಅಂತಹ ಕಾರುಗಳು ಇಂದು ಬೆಂಕಿಗಾಹುತಿ ಆಗಿದ್ದು ನಿಜಕ್ಕೂ ದುರಂತ.

ಮುನ್ನೂರು ಕಾರುಗಳು ಮರುಬಳಕೆ ಆಗಲಾರವು
ಅಗ್ನಿ ಅವಘಡದಿಂದಾಗಿ ಮತ್ತಿನ್ನೆಂದು ಮರುಬಳಕೆ ಮಾಡಲಾಗದ ಸ್ಥಿತಿಗೆ ಮುನ್ನೂರು ಕಾರುಗಳು ತಲುಪಿವೆ. ಕಾರಿನ ಅಸ್ಥಿ ಪಂಜರ ಬಿಟ್ಟರೆ, ಒಳಗೆ ಇನ್ನೇನೂ ಉಳಿದಿಲ್ಲ. ನೆಚ್ಚಿನ ಕಾರುಗಳನ್ನು ಗುಜರಿಗೆ ಹಾಕದೇ ಬೇರೆ ದಾರಿಯಿಲ್ಲ.

ವಿಮೆ ಕೊಡಬಲ್ಲರು ಆ ಕ್ಷಣ ಕೊಡಬಲ್ಲರೆ
ಒಂದೇ ಕ್ಷಣದಲ್ಲಿ ತಮ್ಮ ಕನಸಿನ ಕೂಸು ಸುಟ್ಟು ಬೂದಿಯಾಗಿದ್ದಕ್ಕೆ ಎಷ್ಟೋ ಜನ ಕಣ್ಣೀರಿಟ್ಟರು. ಸುಟ್ಟು ಕರಕಲಾಗಿರುವ ನೂರಾರು ಕಾರುಗಳ ಮಧ್ಯೆ ತಮ್ಮದು ಯಾವುದು ಎಂದು ಗುರುತಿಸಲು ಆಗದೆ ಜನ ಒದ್ದಾಡುತ್ತಿದ್ದರು. ಸುಟ್ಟು ಹೋದ ಕಾರಿಗೆ ನಾಳೆ ಇನ್ಶುರೆನ್ಸ್ ಸಿಗಬಹುದು. ಆದ್ರೆ, ಕಾರಿನೊಂದಿಗೆ ಕಳೆದ ಕ್ಷಣಗಳನ್ನು, ಪಟ್ಟ ಖುಷಿಯನ್ನು ಯಾರಾದರೂ ವಾಪಸ್ ಕೊಡಿಸಬಲ್ಲರೇ.?












Click it and Unblock the Notifications