ಉದ್ಯೋಗ ಕೊಡಿಸುವುದಾಗಿ ವಂಚನೆ : ಶ್ಯಾಂ ಭಟ್ ವಿರುದ್ಧ ಎಫ್‌ಐಆರ್
ಬೆಂಗಳೂರು, ಮೇ 15 : ಕರ್ನಾಟಕ ಲೋಕಸಭಾ ಆಯೋಗದ ಮಾಜಿ ಅಧ್ಯಕ್ಷ ಶ್ಯಾಂ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬುದು ಆರೋಪವಾಗಿದೆ.
ಸಶಸ್ತ್ರ ಮೀಸಲು ಪಡೆ ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಸಿದ್ದಯ್ಯ ನೀಡಿದ ದೂರಿನ ಅನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶ್ಯಾಂ ಭಟ್, ಜೆಡಿಎಸ್ ಮುಖಂಡ ಧನರಾಜ್, ನಿವೃತ್ತ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ಆರೋಪಿಗಳು.
ಅಬಕಾರಿ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಯ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬುದು ದೂರು. ಎಫ್ಐಆರ್ ದಾಖಲಾಗಿರುವುದನ್ನು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ಖಚಿತಪಡಿಸಿದ್ದಾರೆ.

ದೂರಿನ ವಿವರ : ಸಿದ್ದಯ್ಯ ಅವರಿಗೆ ಪ್ರದೀಪ್ ಮೂಲಕ ಪರಿಚಯವಾಗಿದ್ದ ಧನರಾಜ್ ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಂ ಭಟ್ ನನಗೆ ಸ್ನೇಹಿತರು. 20 ಲಕ್ಷ ಕೊಟ್ಟರೆ ಅವರನ್ನು ನೇರವಾಗಿ ಭೇಟಿ ಮಾಡಿಸಿ ಅಬಕಾರಿ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿದ್ದರು.
ಸಿದ್ದಯ್ಯ ಅವರು ಮುಂಗಡವಾಗಿ 10 ಲಕ್ಷ ಹಣ ಕೊಟ್ಟಿದ್ದರು. ಅದನ್ನು ಶ್ಯಾಂ ಭಟ್ ಅವರಿಗೆ ನೀಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಸಿದ್ದಯ್ಯ ಅವರ ಮಗನಿಗೆ ಉದ್ಯೋಗ ಸಿಕ್ಕಿಲ್ಲ, ಆಗ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದರು.
3 ಲಕ್ಷವನ್ನು ಮಾತ್ರ ನೀಡಿರುವ ಆರೋಪಿಗಳು ಇನ್ನೂ 7 ಲಕ್ಷ ನೀಡಿಲ್ಲ. ಮೂವರು ಸೇರಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಲ್ಲಾ ಆರೋಪಿಗಳಿಗೆ ಪೊಲೀಸರು ವಿಚಾರಣೆಗೆ ಬರಲು ನೋಟಿಸ್ ನೀಡಿದ್ದಾರೆ.












Click it and Unblock the Notifications