ವಿಕ್ಟೋರಿಯಾ ಆಸ್ಪತ್ರೆಗೆ ಕೊನೆಗೂ ಭೇಟಿ ನೀಡಿದ ಮೇಯರ್
ಬೆಂಗಳೂರು, ಸೆಪ್ಟೆಂಬರ್ 9: ಶುಕ್ರವಾರ (ಸೆ. 8) ರಾತ್ರಿ ಮಿನರ್ವ ಸರ್ಕಲ್ ನಲ್ಲಿ ನಡೆದಿದ್ದ ದುರಂತದಲ್ಲಿ ಮೃತಪಟ್ಟ ಸಂಬಂಧಿಗಳಿಗೆ ಸಾಂತ್ವನ ಹೇಳಲು ಬಿಬಿಎಂಪಿ ಮೇಯರ್ ಆಗಿರುವ ಪದ್ಮಾವತಿ ಅವರು ಶನಿವಾರ ಸಂಜೆ ವೇಳೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರು.
ಭೇಟಿಯ ವೇಳೆ, ಮೃತರ ಸಂಬಂಧಿಗಳನ್ನು ಸಾಂತ್ವನಗೊಳಿಸಿದ ಅವರು, ಪ್ರತಿಯೊಬ್ಬ ಮೃತರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದರಲ್ಲದೆ, ಮೃತರ ಕುಟುಂಬದಿಂದ ತಲಾ ಒಬ್ಬರಿಗೆ ಬಿಬಿಎಂಪಿಯಲ್ಲಿ ಉದ್ಯೋಗ ನೀಡುವ ಭರವಸೆಯನ್ನೂ ನೀಡಿದರು.

ಶುಕ್ರವಾರ (ಸೆ. 8) ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಿನರ್ವ ಸರ್ಕಲ್ ನ ಬಳಿ ಮರವೊಂದು ಕಾರೊಂದರ ಮೇಲೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ರಮೇಶ್, ಭಾರತಿ ಹಾಗೂ ಜಗದೀಶ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಉಳಿದ ಇಬ್ಬರನ್ನು ಸ್ಥಳೀಯರು ಪಾರು ಮಾಡಿದ್ದರು.
ಶನಿವಾರ ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತರ ಶವಪರೀಕ್ಷೆ ನಡೆಸಲಾಯಿತು. ಆಗ, ಮೃತರ ಸಂಬಂಧಿಗಳು ನಗರದ ಮೇಯರ್ ಆಸ್ಪತ್ರೆಗೆ ಬಂದ ನಂತರವೇ ತಾವು ಶವಗಳನ್ನು ಪಡೆಯುವುದಾಗಿ ಹಠ ಹಿಡಿದರು. ಅಲ್ಲದೆ, ತಮ್ಮ ಕುಟುಂಬದ ಸದಸ್ಯರ ಸಾವಿಗೆ ಬಿಬಿಎಂಪಿಯೇ ನೇರ ಹೊಣೆ ಎಂದು ಆರೋಪಿಸಿದ್ದರು.
ಇದು ಮಧ್ಯಾಹ್ನದ ಹೊತ್ತಿಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಇದನ್ನು ತಿಳಿದ ಪದ್ಮಾವತಿ ಅವರು ಸಂಜೆ ವೇಳೆ ವಿಕ್ಟೋರಿಯಾ ಆಸ್ಪತ್ರೆಗೆ ಧಾವಿಸಿ, ಬಂದು ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿದರು.












Click it and Unblock the Notifications