Church Street: ಚರ್ಚ್ ಸ್ಟ್ರೀಟ್‌ನಲ್ಲಿ ಫಿಲಂ ಶೂಟಿಂಗ್ ಮಾಡುವಂತಿಲ್ಲ ಎಂದ ಬಿಬಿಎಂಪಿ
ಬೆಂಗಳೂರು, ಫೆಬ್ರವರಿ.27: ಯಾವಾಗಲೂ ಜನರಿಂದ ತುಂಬಿ ತುಳುಕುವ ಜನನಿಬಿಡ ಚರ್ಚ್ ಸ್ಟ್ರೀಟ್‌ನಲ್ಲಿ ಚಲನಚಿತ್ರಗಳ ಶೂಟಿಂಗ್ ನಡೆಸಬಾರದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ. ವಾರಾಂತ್ಯಗಳಲ್ಲಿ ಕಾಲಿಡುವುದು ಕಷ್ಟವಿರುವ ಇಲ್ಲಿ ಚೀತ್ರೀಕರಣ ಮಾಡಿದರೇ ಟ್ರಾಫಿಕ್ ಮೇಲೆ ಪರಿಣಾಮ ಬೀರುವುದಾಗಿ ತಿಳಿಸಿದೆ.
ಸಿಲಿಕಾನ್ ಸಿಟಿಯ ಮೈನ್ ಅಟ್ರಾಕ್ಷನ್ ಪಾಯಿಂಟ್ ಆಗಿರುವ ಚರ್ಚೆ ಸ್ಟ್ರೀಟ್‌ನಲ್ಲಿ ಫಿಲಂ ಶೂಟಿಂಗ್‌ಗಳು ನಡೆಯುವುದರಿಂದ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ವಾರಾಂತ್ಯದಲ್ಲಿ ಪಾರ್ಟಿಗೆ ಹೋಗುವವರು ಮತ್ತು ಖರೀದಿದಾರರಿಗೆ ಚರ್ಚ್ ಸ್ಟ್ರೀಟ್ ಬೆಂಗಳೂರಿನ ಪ್ರಮುಖ ಆಕರ್ಷಣೆಯಾಗಿದೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಅಧಿಕವಾಗಿದ್ದು, ಯುವ ಜನತೆಯನ್ನು ಆಕರ್ಷಿಸುತ್ತದೆ.

ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಚರ್ಚ್ ಸ್ಟ್ರೀಟ್ ತುಂಬಾ ಬ್ಯುಸಿ ಇರುತ್ತದೆ. ವೀಕೆಂಡ್ ಪಾರ್ಟಿ ಮಾಡುವವರು ಎ್ಲಾ ಕಡೆ ತುಂಬಿರುತ್ತಾರೆ. ಹೀಗಿರುವಾಗ ಭಾನುವಾರ ಚರ್ಚ್ ಸ್ಟ್ರೀಟ್ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದುದನ್ನು ಗಮನಿಸಿದ ಬಿಬಿಎಂಪಿ ಈ ಆದೇಶ ಹೊರಡಿಸಿದೆ. ಸೂಕ್ತ ಅನುಮತಿ ಪಡೆಯದೇ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ, ಚಿತ್ರ ತಂಡವು ಪೊಲೀಸರಿಂದ ಅನುಮತಿ ಪಡೆದಿದೆ ಎಂದು ಮಲಯಾಳಂ ಚಿತ್ರದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಆದರೆ, ಪೊಲೀಸ್ ಸಿಬ್ಬಂದಿ ಸಿನಿಮಾ ಶೂಟಿಂಗ್‌ಗೆ ಅನುಮತಿ ನೀಡಿಲ್ಲ. ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ (ಕೆಎಫ್‌ಸಿಸಿ) ಅನುಮತಿ ತೆಗೆದುಕೊಂಡಿರಬಹುದು ಎಂದು ಕೇಂದ್ರೀಯ ಡಿಸಿಪಿ ಶೇಖರ್ ಎಚ್.ತೆಕ್ಕನವರ್ ಹೇಳಿದ್ದಾರೆ. ಮತ್ತೊಂದೆಡೆ, ಕೆಎಫ್‌ಸಿಸಿ ಅಧ್ಯಕ್ಷ ಎನ್.ಎಂ.ಸುರೇಶ್, "ನಾವು ಯಾವುದೇ ಅನುಮತಿ ನೀಡಿಲ್ಲ ಮತ್ತು ಅನುಮತಿ ನೀಡಲು ನಮಗೆ ಯಾವುದೇ ಅಧಿಕಾರವಿಲ್ಲ. ಇದು ರಾಜ್ಯದ ವಿಷಯ" ಎಂದು ತಿಳಿಸಿದ್ದಾರೆ.

ಸಿನಿಮಾ ಚಿತ್ರೀಕರಣದ ಕಾರಣ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ರಸ್ತೆಯಲ್ಲಿ ಪಾನ್ ಅಂಗಡಿ ನಡೆಸುತ್ತಿರುವ ರಮೇಶ್ ಎಸ್ ಹೇಳಿದ್ದಾರೆ. "ಚಿತ್ರತಂಡ ಪಾದಚಾರಿ ಮಾರ್ಗದಲ್ಲಿ ಶೂಟಿಂಗ್ ಮಾಡುತ್ತಿದ್ದರು. ನೂರಾರು ಜನರು ಶೂಟಿಂಗ್ ವೀಕ್ಷಿಸಲು ನಿಂತರು. ಶೂಟಿಂಗ್ ಮಾಡಲು ಅನುಮತಿ ಇದೆಯೇ ಎಂದಯ ಕೇಳಿದೆ. ಅವರು ಇದೆ ಅಂದರು. ಆದರೆ ನಾನು ಇಲ್ಲಿ ಸಿನಿಮಾ ಶೂಟಿಂಗ್ ನೋಡುತ್ತಿರುವುದು ಇದೇ ಮೊದಲು. ಅವರ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ ಎಂದು ದಿ ಹಿಂದೂ ಉಲ್ಲೇಖಿಸಿದೆ.
ಸಿನಿಮಾ ಶೂಟಿಂಗ್ ಕೇವಲ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ, ವ್ಯಾಪಾರಕ್ಕೂ ಅಡ್ಡಿಪಡಿಸುತ್ತದೆ ಎಂದು ಹೋಟೆಲ್ ಉದ್ಯಮಿಯೊಬ್ಬರು ಹೇಳಿದರು. ನಿಧಾನಗತಿಯ ಸಂಚಾರದಿಂದ ಜನರು ಬೇರೆ ಪ್ರದೇಶಗಳಿಗೆ ಹೋಗುವಂತಾಗಿದೆ ಎಂದು ಆರೋಪಿಸಿದ್ದಾರೆ. "ನನ್ನ ಅಂಗಡಿಯ ಬಳಿ ಶೂಟಿಂಗ್ ನಡೆದಿದೆ. ಜನರು ಜಮಾಯಿಸುತ್ತಿದ್ದಂತೆ, ಪೀಕ್ ಅವರ್‌ನಲ್ಲಿ ನಾನು ವ್ಯಾಪಾರವನ್ನು ಕಳೆದುಕೊಂಡೆ. ಸಿಬ್ಬಂದಿ ರಸ್ತೆಯಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದರು ಮತ್ತು ಪ್ರಯಾಣಿಕರು ಓಡಾಡಲು ಹೆಣಗಾಡುತ್ತಿದ್ದರು" ಎಂದು ಅವರು ಆರೋಪಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು "ದಿ ಹಿಂದೂ" ಜೊತೆ ಮಾತನಾಡಿದ್ದು, "ಚರ್ಚ್ ಸ್ಟ್ರೀಟ್‌ನಲ್ಲಿ ಚಲನಚಿತ್ರಗಳ ಚಿತ್ರೀಕರಣವನ್ನು ನಿರ್ಬಂಧಿಸಲಾಗಿದೆ. ಸಿನಿಮಾ ಶೂಟಿಂಗ್ ಮಾಡಲು ಪೊಲೀಸರು ಅಥವಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ನೀಡಲು ಸಾಧ್ಯವಿಲ್ಲ. ಅದೊಂದು ಜನನಿಬಿಡ ರಸ್ತೆ. ಸಿನಿಮಾ ಶೂಟಿಂಗ್ ವೇಳೆ ಸಂಚಾರಕ್ಕೆ ಅಡ್ಡಿಯಾಗಲಿದ್ದು, ಬಿಬಿಎಂಪಿ ತಡೆ ನೀಡಿದೆ" ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications