ಪತ್ರಿಕೋದ್ಯಮದ ಕಟ್ಟಾಳು ಎಂ.ಬಿ. ಸಿಂಗ್ ಅವರಿಗೆ ಅಭಿನಂದನೆ
ಬೆಂಗಳೂರು, ಮೇ 23 : ಪ್ರಜಾವಾಣಿ, ಸುಧಾ ಮತ್ತು ಮಯೂರ ಪತ್ರಿಕೆಗಳ ಸಂಪಾದಕರಾಗಿದ್ದ ಎಂ.ಬಿ. ಸಿಂಗ್ ಅವರಿಗೆ ಭಾನುವಾರ, 24 ಮೇ 2015ಕ್ಕೆ 90 ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಅವರಿಗೆ ಆತ್ಮೀಯರಿಂದ ಅಭಿನಂದನೆ ಮತ್ತು "ಎಂ.ಬಿ. ಸಿಂಗ್ : ಕನ್ನಡ ಪತ್ರಿಕೋದ್ಯಮದ ಕಟ್ಟಾಳು" ಎಂಬ ಕೃತಿಯ ಲೋಕಾರ್ಪಣೆ ಸಮಾರಂಭವನ್ನು "ವಿಕಾಸ ಪ್ರಕಾಶನ" ಏರ್ಪಡಿಸಿದೆ.
ಜಿ.ಎನ್. ರಂಗನಾಥ ರಾವ್ ಮತ್ತು ಎಚ್.ಎನ್. ಆನಂದ ಅಭಿನಂದನಾ ಭಾಷಣ ಮಾಡಲಿದ್ದಾರೆ. ನಾಳೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ತಾವು ಭಾಗವಹಿಸಬೇಕೆಂದು ಪ್ರಜಾವಾಣಿಯಲ್ಲಿ ಸಹಾಯಕ ಸಂಪಾದಕಿಯಾಗಿರುವ ಡಾ. ಆರ್ ಪೂರ್ಣಿಮಾ ಅವರು ಮನವಿ ಮಾಡಿದ್ದಾರೆ. [ಪ್ರಜಾವಾಣಿ ಪತ್ರಿಕೆಯ ಕಟ್ಟಾಳು ಎಂ.ಬಿ.ಸಿಂಗ್ ಕಣ್ಮರೆ]

ಎಂಬಿ ಸಿಂಗ್ ಕುರಿತು : ಮೈಸೂರಿನಲ್ಲಿ 1925ರ ಮೇ 24ರಂದು ಭುವನ ಸಿಂಗ್ ಅವರ ಜನನ. ತಂದೆ ಮದನ ಸಿಂಗ್, ತಾಯಿ ವಸಂತಾ ಬಾಯಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಂಡ್ಯದಲ್ಲಿ, ಕಾಲೇಜು ಶಿಕ್ಷಣ ಮೈಸೂರಿನಲ್ಲಿ. ವಿದ್ಯಾರ್ಥಿ ದೆಸೆಯಲ್ಲಿ 'ಮಾತೃಭೂಮಿ' ಪತ್ರಿಕೆಯ ಮೈಸೂರು ವರದಿಗಾರ ಹಾಗು ಏಜೆಂಟರಾಗಿ ಕಾರ್ಯ ನಿರ್ವಹಣೆ.
'ವಾರ್ತಾ', 'ಚಿತ್ರಗುಪ್ತ', 'ವಿಶ್ವ ಕರ್ನಾಟಕ' ಪತ್ರಿಕೆಗಳಲ್ಲಿ ಕೆಲಸ. 'ಪ್ರಜಾವಾಣಿ' ಸೇರಿದ್ದು 1953ರಲ್ಲಿ. ಉಪ ಸಂಪಾದಕ-ವರದಿಗಾರನಾಗಿ ದುಡಿಮೆ ಆರಂಭಿಸಿ, 'ದಿ ಪ್ರಿಂಟರ್ಸ್ (ಮೈಸೂರು) ಪ್ರೈ.ಲಿ.'ನ ಮೂರು ಕನ್ನಡ ಪ್ರಕಟಣೆ(ಪ್ರಜಾವಾಣಿ, ಸುಧಾ, ಮಯೂರ)ಗಳಿಗೂ ಸಂಪಾದಕರಾಗಿ ಕೆಲಸ ಮಾಡಿದ ಹೆಮ್ಮೆ ಅವರದು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಹಾಗು ಟೀಯೆಸ್ಸಾರ್ ಪ್ರಶಸ್ತಿಗಳು ಕನ್ನಡ ಪತ್ರಿಕೋದ್ಯಮದ ಕಟ್ಟಾಳು ಎಂಬಿ ಸಿಂಗ್ ಅವರಿಗೆ ಸಂದಿವೆ. ಪ್ರಜಾವಾಣಿಗೆ ಕೆಲಸಕ್ಕೆ ಸೇರಿಕೊಂಡಾಗ, ಹೇಗೆ ಕೆಲಸ ನಿರ್ವಹಿಸುತ್ತಿದೆ ಎಂಬ ಬಗ್ಗೆ ಅವರೇ ಹೇಳಿಕೊಂಡಿರುವುದು ಇಂದಿನ ಪತ್ರಿಕೋದ್ಯಮಿಗಳಿಗೆ ಪಾಠ.
ಎಂಬಿ ಸಿಂಗ್ ಕೆಲಸ ಮಾಡುತ್ತಿದ್ದ ಪರಿ : "ಪ್ರಜಾವಾಣಿ ಕಚೇರಿಗೆ ನಾನು ಬೆಳಿಗ್ಗೆ ಒಂಬತ್ತಕ್ಕೇ ಹೋಗುತ್ತಿದ್ದೆ. ಕಸ ಗುಡಿಸಿ, ಹಳೆಯ ಪೇಪರುಗಳನ್ನು ಯಾರೂ ಹೊರಗೆ ಹಾಕದೇ ಇದ್ದರೆ ನಾನೇ ಆ ಕೆಲಸವನ್ನು ಮಾಡುತ್ತಿದ್ದೆ. ಎಂದೂ ಗಡಿಯಾರ ನೋಡಿ ಕೆಲಸ ಮಾಡಲೇ ಇಲ್ಲ. ಲೇಖಕರನ್ನು ಖುದ್ದು ಹುಡುಕಿಕೊಂಡು ಹೋಗುತ್ತಿದ್ದೆ. ಬರೆಯುವಂತೆ ಓಲೈಸಲು ಸಾಕಷ್ಟು ಹೆಣಗಾಡಿದ್ದೂ ಇದೆ. ಇವನ್ನೆಲ್ಲಾ ನೋಡಿದ ಸಹೋದ್ಯೋಗಿಗಳು ತಂತಾನೇ ಪ್ರೀತಿಯಿಂದ ಕೆಲಸ ಮಾಡತೊಡಗಿದರು. ನಾನು ಒತ್ತಡ ಹೇರಿ ಕೆಲಸ ಮಾಡಿಸಲಿಲ್ಲ. ಕೆಲಸದ ಬಗ್ಗೆ ಪ್ರೀತಿ ಮೂಡಿಸಿದೆನಷ್ಟೆ."












Click it and Unblock the Notifications