ಮೆಡಿಕಲ್ ಸೀಟು ಭೀತಿ: ವಿದ್ಯಾರ್ಥಿನಿ ಆತ್ಮಹತ್ಯೆ

ಬನಶಂಕರಿ 2ನೇ ಹಂತ, ಕಾವೇರಿನಗರದ ನಿವಾಸಿ ಎನ್.ವಿನುತಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕೋಲಾರ ಮೂಲದ ನಂದಕುಮಾರ್ ಮತ್ತು ಲಕ್ಷ್ಮಿ ದಂಪತಿ ಪುತ್ರಿ ವಿನುತಾ ಕನಕಪುರ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪಿಯಸಿಯಲ್ಲಿ ವಿಜ್ಞಾನ ವಿಷಯವನ್ನು ಆರಿಸಿಕೊಂಡಿದ್ದಳು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ವಿನುತಾ ಮುಂದೆ ವೈದ್ಯೆಯಾಗಬೇಕೆಂದು ಕಷ್ಟಪಟ್ಟು ಓದಿ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 518 ಅಂಕ ಪಡೆದಿದ್ದಳು.
ವಿನುತಾಗೆ ಸಿಇಟಿ ಪರೀಕ್ಷೆಯಲ್ಲಿ 6044 ಶ್ರೇಯಾಂಕ ಬಂದಿದ್ದು, ಮೆಡಿಕಲ್ ಸೀಟು ಸಿಗುವುದಿಲ್ಲ ಎಂಬ ಆತಂಕಕ್ಕೆ ಒಳಗಾಗಿದ್ದಳು. ಮೆಡಿಕಲ್ ಕೋರ್ಸ್ ಪ್ರವೇಶಕ್ಕೆ ದಾಖಲೆ ಪರಿಶೀಲನೆಗೆ ಹಿಂದೇಟು ಹಾಕುತ್ತಿದ್ದ ಮಗಳಿಗೆ ಧೈರ್ಯ ಹೇಳಿ ತಂದೆ ಮಂಗಳವಾರ ಮಲ್ಲೇಶ್ವರದಲ್ಲಿರುವ ಸಿಇಟಿ ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಮಧ್ಯಾಹ್ನ ಕರೆದೊಯ್ದಿದ್ದರು.
ಮಗಳನ್ನು ಕೆಳಗಿಳಿಸಿ ಸ್ಕೂಟರ್‌ನ್ನು ಪಾರ್ಕ್ ಮಾಡಲು ತಂದೆಯವರು ಹೋಗಿದ್ದಾರೆ. ಪಾರ್ಕ್ ಮಾಡಿ ಸಿಇಟಿ ಕಚೇರಿಯ ಮುಂದುಗಡೆಗೆ ಬಂದಾಗ ಮಗಳು ಇಲ್ಲದಿರುವುದು ತಂದೆಯವರ ಗಮನಕ್ಕೆ ಬಂದಿದೆ. ಗಾಬರಿಗೊಂಡ ತಂದೆ ಮಗಳ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ.
ಮಗಳು ಮನೆಗೆ ಹೋಗಿರಬಹುದು ಎಂದು ಭಾವಿಸಿ ನಂದಕುಮಾರ್ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಮಗಳು ಇಲ್ಲದಿರುವುದನ್ನು ಕಂಡು ಆಕೆಯ ಸ್ನೇಹಿತೆಯರು, ಸಂಬಂಧಿಕರ ಮನೆಗೆ ಫೋನ್ ಮಾಡಿ ವಿಚಾರಿಸಿದ್ದರೂ ವಿನುತ ಬಗ್ಗೆ ಸುಳಿವು ಸಿಗಲಿಲ್ಲ. ಕೊನೆಗೆ ರಾತ್ರಿ 1 ಗಂಟೆಯ ವೇಳೆಗೆ ಮಗಳು ಕಾಣೆಯಾಗಿರುವುದರ ಬಗ್ಗೆ ನಂದಕುಮಾರ್ ದೂರು ನೀಡಿದ್ದರು.
ಮಲ್ಲೇಶ್ವರ ರೈಲ್ವೆ ನಿಲ್ದಾಣದ ಹಳಿ ಮೇಲೆ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು, ನಂದಕುಮಾರ್ ಅವರನ್ನು ರೈಲ್ವೆ ಹಳಿ ಬಳಿ ಕರೆದೊಯ್ದು ತೋರಿಸಿದಾಗ ಇದು ವಿನುತಾಳ ಶವ ಎಂದು ಖಚಿತಪಡಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಸಿಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications