ಭೂಗಳ್ಳರ ವಿರುದ್ಧ ಆಪ್ ಆಮರಣಾಂತ ಉಪವಾಸ
ಬೆಂಗಳೂರು, ಅ. 7 : ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕ ಆರಂಭಿಸಿರುವ 'ಭ್ರಷ್ಟರೇ ಕರ್ನಾಟಕ ಬಿಟ್ಟು ತೊಲಗಿ' ಆಂದೋಲನ ತೀವ್ರ ಸ್ವರೂಪ ಪಡೆಯುತ್ತಿದ್ದು, ಸೋಮವಾರ ರಾತ್ರಿಯಿಂದ 9 ಜನ ಕಾರ್ಯಕರ್ತರು ಪುರಭವನದ ಎದುರಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿ ಅವರ ನೇತೃತ್ವದಲ್ಲಿ, ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ ಸದಸ್ಯರಾದ ರಮೇಶ್ ರೆಡ್ಡಿ, ಜಿಎನ್ ಬಸಪ್ಪ, ರವಿ ಅರಕಲಗೂಡು, ಸಮೀರ್ ಅಸದ್, ಜೇಮ್ಸ್ ಜ್ಞಾನ ಸುಂದರ್ ರಾಜ್, ಶಿವಾನಂದ ವಾಲಿ, ವಿಜಯ ಶರ್ಮಾ ಮತ್ತು ಆಂಬ್ರೋಸ್ ಡಿಮೆಲ್ಲೋ ಅವರು ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದಾರೆ.

ಮಂಗಳವಾರದಂದು ಭೂಕಬಳಿಕೆದಾರರ ವಿರುದ್ಧ ನಡೆಸುತ್ತಿರುವ ಹೋರಾಟ 29ನೇ ದಿನಕ್ಕೆ ಕಾಲಿಟ್ಟಿದೆ. ಸರಕಾರದಿಂದ ಒತ್ತುವರಿಯಾಗಿರುವ ಭೂಮಿಯನ್ನು ವಾಪಸ್ ನೀಡಬೇಕು, ಭೂಕಬಳಿಕೆ ಕುರಿತು ಹೂಡಲಾಗಿರುವ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ.
ಭೂಕಬಳಿಕೆ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುತ್ತಿದ್ದರೂ ಸರಕಾರ ಕಣ್ಣು ತೆರೆದಿಲ್ಲ. ಕಾನೂನು ಸಚಿವ ವಿಶೇಷ ನ್ಯಾಯಾಲಯ ಸ್ಥಾಪಿಸುವುದಾಗಿ ಭರವಸೆ ನೀಡಿದ್ದು, ಭರವಸೆಯಾಗಿಯೇ ಉಳಿಸಿದೆ. ಈ ಕುರಿತು ಖಚಿತ ನಿರ್ಧಾರ ತಳೆಯುವವರೆಗೆ ನಮ್ಮ ಈ ಹೋರಾಟ ನಿಲ್ಲುವುದಿಲ್ಲ ಎಂದು ರವಿಕೃಷ್ಣಾ ರೆಡ್ಡಿ ಅವರು ಸರಕಾರಕ್ಕೆ ಚಿತಾವಣೆ ನೀಡಿದ್ದಾರೆ.

ಭೂಕಬಳಿಕೆ ಕುರಿತಂತೆ ಅರಕಲಗೂಡು ಮಾಜಿ ಶಾಸಕ ಎಟಿ ರಾಮಸ್ವಾಮಿ ನೇತೃತ್ವದ ಸಮಿತಿ 2007ರಲ್ಲಿ ವರದಿಯನ್ನು ಸಲ್ಲಿಸಿದೆ. ಒಟ್ಟು 40 ಸಾವಿರ ಕೋಟಿ ಮೌಲ್ಯದ 24 ಸಾವಿರ ಎಕರೆ ಸರಕಾರಿ ಜಮೀನನ್ನು ಕಬಳಿಸಲಾಗಿದೆ. ರಾಜ್ಯಾದ್ಯಂತ 12 ಲಕ್ಷ ಎಕರೆಯಷ್ಟು ಜಮೀನು ಕಬಳಿಸಲಾಗಿದೆ ಎಂದು ರಾಮಸ್ವಾಮಿ ವರದಿ ನೀಡಿದ್ದಾರೆ. ತಪ್ಪಿತಸ್ಥರಿಗೆ ಜೈಲು ಶಿಕ್ಷೆಯಾಗಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ, ವರದಿ ಇನ್ನೂ ಅನುಷ್ಠಾನಕ್ಕೆ ತರಲಾಗಿಲ್ಲ.

ಈ ಕುರಿತು ಖಾರವಾಗಿ ಮಾತನಾಡಿರುವ ರಾಮಸ್ವಾಮಿ ಅವರು, ಬಿಜೆಪಿ ಸರಕಾರ ಮಾಡಿದ್ದ ಭ್ರಷ್ಟಾಚಾರದಿಂದ ರೋಸತ್ತು ಹೋಗಿದ್ದ ಜನರು ಕಾಂಗ್ರೆಸ್ ಸರಕಾರವನ್ನು ಆಯ್ಕೆ ಮಾಡಿದರು. ಆದರೆ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಕೂಡ ಭೂಗಳ್ಳರಿಗೆ ಮತ್ತು ಖದೀಮರಿಗೆ ಆಸರೆಯಾಗಿ ನಿಂತಿದೆ. ಇಂಥ ಧೋರಣೆಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications