ರೈತನಿಗೆ ಪ್ರವೇಶ ನಿರಾಕರಣೆ: ಬೆಂಗಳೂರು ಮಾಲ್‌ಗಳಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 04: ಬೆಂಗಳೂರು ನಗರದ ಮಾಲ್ ಒಂದರಲ್ಲಿ ರೈತನ ಉಡುಪಿನ ಕಾರಣಕ್ಕೆ ಪ್ರವೇಶ ನಿರಾಕರಿಸಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಮಾಲ್ ಕ್ಷಮೆಯನ್ನು ಸಹ ಕೇಳಿತ್ತು. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಲ್‌ಗಳಿಗೆ ಖಡಕ್ ಆದೇಶವೊಂದನ್ನು ನೀಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತರ ಕಛೇರಿ ಈ ಕುರಿತು ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪಾರಂಪರಿಕ (ಪಂಚೆ) ಉಡುಪು ಧರಿಸಿ ವಾಣಿಜ್ಯ ಸಮುಚ್ಚಯಕ್ಕೆ ಪ್ರವೇಶಿಸುವ ಸಮಯದಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿಗಳು ತಡೆ ಹಿಡಿದು ಪ್ರವೇಶವನ್ನು ನಿರಾಕರಿಸಿರುವ ಕುರಿತಾದ ವರದಿಗಳು ಮುದ್ರಣ/ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಣೆಗೊಂಡಿದ್ದು, ಸಾರ್ವಜನಿಕರ ಪಾರಂಪರಿಕ ಉಡುಪಿನ ಬಗ್ಗೆ ತಾರತಮ್ಯ ಮಾಡಿರುವುದು ಕಂಡು ಬಂದಿರುತ್ತದೆ ಎಂದು ಹೇಳಿದೆ.

ಭಾರತೀಯ ಸಂವಿಧಾನ ಆರ್ಟಿಕಲ್ 14, 19, 21, 25 ಅನ್ನು ಗಣನೆಗೆ ತೆಗೆದುಕೊಂಡು ಮತ್ತು ಸಂವಿಧಾನದ ಆರ್ಟಿಕಲ್ 5(1), (2) ರಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕರಿಗೂ ಸಾರ್ವಜನಿಕ ಪ್ರದೇಶಗಳಿಗೆ ಸಮಾನ ಪ್ರವೇಶ ಮತ್ತು ಸಾಮಾಜಿಕ ಸಮಾನತೆಯ ಹಕ್ಕನ್ನು ಖಾತ್ರಿ ಪಡಿಸುತ್ತದೆ. ಅದು ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದ ಮೇಲೆ ಮಾತ್ರ ತಾರತಮ್ಯ ಮಾಡಬಾರದೆಂದು ಉಲ್ಲೇಖಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರಿಗೆ ಈ ಕೆಳಕಂಡಂತೆ ನಿರ್ದೇಶನ ನೀಡಲಾಗಿದೆ ಎಂದು ಆದೇಶ ತಿಳಿಸಿದೆ.
ನಿರ್ದೇಶನಗಳು
* ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರುಗಳು ಸಾರ್ವಜನಿಕರಿಗೆ ಪ್ರವೇಶ ಸಂದರ್ಭದಲ್ಲಿ ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂದು ಈ ಮೂಲಕ ಸೂಚಿಸಿದೆ.
* ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರುಗಳು ಸಾರ್ವಜನಿಕರು ಧರಿಸಿರುವ ಉಡುಪಿನ ಆಧಾರದ ಮೇಲೆ ಮಾತ್ರ ಪ್ರವೇಶವನ್ನು ನಿರಾಕರಿಸದಂತೆ ತಮ್ಮ ಭದ್ರತಾ ಸಿಬ್ಬಂದಿಗಳಿಗೆ ಮೇಲೆ ಸೂಚಿಸಿರುವ ನಿರ್ದೇಶನದಂತೆ ಸೂಕ್ತ ಮಾರ್ಗದರ್ಶನ ನೀಡಲು ಸೂಚಿಸಿದೆ.
* ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಲು ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರುಗಳಿಗೆ ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ.
* ಮುಂದಿನ ದಿನಗಳಲ್ಲಿ ಮೇಲ್ಕಂಡ ಅಂಶಗಳನ್ನು ಪಾಲಿಸದಿದ್ದಲ್ಲಿ ಅಂತಹ ವಾಣಿಜ್ಯ ಸಮುಚ್ಚಯಗಳು ಮತ್ತು ಅಂಗಡಿಗಳು ಸಂವಿಧಾನದ ಹಕ್ಕುಗಳನ್ನು ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಅಪರಾಧ ಎಂದು ಪರಿಗಣಿಸಿ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಸದರಿ ವಾಣಿಜ್ಯ ಸಮುಚ್ಚಯಗಳು/ ಉದ್ದಿಮೆಗಳಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗುವುದು.
* ಮುಂದಿನ ದಿನಗಳಲ್ಲಿ ವಾಣಿಜ್ಯ ಸಮುಚ್ಚಯಗಳು ಮತ್ತು ಅಂಗಡಿಗಳಲ್ಲಿ ಈ ರೀತಿಯಾದ ಘಟನೆಗಳು ಸಂಭವಿಸಿದ್ದಲ್ಲಿ, ಅಂತಹ ವಾಣಿಜ್ಯ ಸಮುಚ್ಚಯಗಳು ಮತ್ತು ಅಂಗಡಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.












Click it and Unblock the Notifications