ನೆಲಮಂಗಲ-ಯಶವಂತಪುರ ರಸ್ತೆಗೆ ನಟಿ ಲೀಲಾವತಿ ಹೆಸರಿಡಲು ಆಗ್ರಹ: ಪ್ರಸ್ತಾವನೆ ಸಲ್ಲಿಕೆ
ಬೆಂಗಳೂರು, ಡಿಸೆಂಬರ್ 12: ಬೆಂಗಳೂರಿನ ರಸ್ತೆಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ ಯಾಕೆಂದರೆ ನಗರದ ಬಹುತೇಕ ರಸ್ತೆಗಳಿಗೆ ಕನ್ನಡ ಚಿತ್ರರಂಗದ ನಟ, ನಟಿಯರು, ರಾಜಕೀಯ ಗಣ್ಯರ ಹೆಸರು, ಹಾಗೂ ಸಾಹಿತಿಗಳ ಹೆಸರಿಡಲಾಗಿದೆ. ರಾಜ್ಯದಲ್ಲಿ ಗಣ್ಯರಾಗಿ ಗುರುತಿಸಿಕೊಂಡವರ ನೆನಪಿಗಾಗಿ ಬೆಂಗಳೂರು ನಗರದ ರಸ್ತೆಗಳಿಗೆ ಅವರ ಹೆಸರು ಇಡಲಾಗಿದೆ.
ಡಾ. ರಾಜ್‌ಕುಮಾರ್ ರಸ್ತೆ, ಪುನೀತ್ ರಾಜ್ ಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆ, ಕುವೆಂಪು ರಸ್ತೆ, ಪಾರ್ವತಮ್ಮ ರಾಜ್‌ಕುಮಾರ್ ರಸ್ತೆ, ಅಂಬರೀಷ್ ರಸ್ತೆ ಹೀಗೆ ಅನೇಕರ ಹೆಸರನ್ನು ಬೆಂಗಳೂರಿನ ರಸ್ತೆಗಳಿಗೆ ಇಡಲಾಗಿದ್ದು, ಇದೀಗ ಮತ್ತೊಂದು ಹಿರಿಯ ನಟಿಯ ಹೆಸರನ್ನು ಬೆಂಗಳೂರಿನ ರಸ್ತೆ ಇಡುವಂತೆ ಆಗ್ರಹ ಕೇಳಿ ಬರುತ್ತಿದೆ.

ಇತ್ತೀಚಿಗೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಹೆಸರನ್ನು ನೆಲಮಂಗಲದಿಂದ ಯಶವಂತಪುರ ರಸ್ತೆಗೆ ಇಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ನಟಿ ಲೀಲಾವತಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಪಂಚ ಭಾಷೆಯಲ್ಲಿ ನಟಿಸಿ ಜನಪ್ರಿಯತೆ ಪಡೆದವರು. ನಟನೆಯಲ್ಲಿ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡವರು. ಹೀಗಾಗಿ ಅವರ ಹೆಸರನ್ನು ಬೆಂಗಳೂರಿನ ಒಂದು ರಸ್ತೆಗೆ ಇಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ಇನ್ನು ನೆಲಮಂಗಲ-ಯಶವಂತಪುರ ಸಂಪರ್ಕಿಸುವ ರಸ್ತೆಗೆ ನಟಿ ಲೀಲಾವತಿ ಅವರ ಹೆಸರನ್ನು ಇಡಬೇಕು ಎಂದು ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯದರು, ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಬೆಂಗಳೂರಿನ ಹಲವು ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್, ವಿಷ್ಣುವರ್ಧನ್, ರಾಜ್ ಕುಮಾರ್ ಸೇರಿದಂತೆ ಹಲವು ಪ್ರಸಿದ್ಧ ನಟರ ಹೆಸರಿಡಲಾಗಿದೆ. ಇದೇ ರೀತಿ ನೆಲಮಂಗಲದಿಂದ ಯಶವಂತಪುರ ಸಂಪರ್ಕಿಸುವ ರಸ್ತೆಗೆ ನಟಿ ಲೀಲಾವತಿ ಹೆಸರಿಡುವಂತೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಲೀಲಾವತಿಯವರ ಸಿನಿಮಾ ರಂಗದ ಸಾಧನೆ ಜೊತೆಗೆ ಸಾಮಾಜಿಕ ಕೆಲಸಗಳನ್ನು ಗುರುತಿಸಿ ಸರ್ಕಾರ, ಅವರ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ಸಲ್ಲಿಸಿ ಗೌರವ ಸೂಚಿಸಿತ್ತು. ಇದೀಗ ಪಾಲಿಕೆಯ ಆಯುಕ್ತರ ಮೂಲಕ ನೆಲಮಂಗಲದಿಂದ ಯಶವಂತಪುರ ರಸ್ತೆಗೆ ಲೀಲಾವತಿಯವರ ಹೆಸರಿಡುವ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ನಟಿ ಲೀಲಾವತಿ ಸಮಾಜ ಸೇವೆ
ಬಾಲ್ಯದಿಂದಲೇ ಕಷ್ಟಗಳನ್ನು ನೋಡಿಕೊಂಡು ಬೆಳೆದ ನಟಿ ಲೀಲಾವತಿ ಇತರರ ಕಷ್ಟಕ್ಕೆ ನೆರವಾಗುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಸಿನಿಮಾ ಕಾರ್ಮಿಕರಿಗೆ ದಿನಸಿ ವಿತರಣೆ ಮಾಡಿದರು. ಕಲಾವಿದರಿಗೆ, ತಂತ್ರಜ್ಞರಿಗೆ ಪಿಂಚಣಿ ಕೊಡಿಸಬೇಕು ಎಂದು ನಟಿ ಲೀಲಾವತಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು. 150ಕ್ಕೂ ಹೆಚ್ಚು ಕಲಾವಿದರಿಗೆ ಪ್ರತಿ ತಿಂಗಳು ಮಾಸಾಶನ ತಪ್ಪದೇ ನೀಡುತ್ತಿದ್ದರು. ಚಿತ್ರರಂಗದ ಕಲಾವಿದರಿಗೆ ಈ ರೀತಿ ನೆರವಾದ ಲೀಲಾವತಿ ಅವರು ತಮ್ಮ ಊರಿನ ಜನರ ಕಷ್ಟಕ್ಕೂ ನೆರವಾಗಿದ್ದರು.
ಸೋಲದೇನವಹಳ್ಳಿಯಲ್ಲಿ 6 ಬೆಡ್ಗಳ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿ, ವೈದ್ಯರಿಗೆ ವೇತನವನ್ನು ಸಹ ನೀಡಿ ಆಸ್ಪತ್ರೆ ನಡೆಸುತ್ತಿದ್ದರು. ಅಲ್ಲದೇ ಗ್ರಾಮೀಣ ಪ್ರದೇಶದ ಪ್ರಾಣಿಗಳ ರಕ್ಷಣೆಗೆ ಪಶು ಆಸ್ಪತ್ರೆಗೆ ನಿರ್ಮಾಣ ಮಾಡಿದರು. ಇನ್ನು ತಾವೂ ಕೃಷಿಕರಾಗುವುದರ ಜೊತೆಗೆ ತಮ್ಮೂರಿನ ರೈತರಿಗೆ ನೆರವಾಗುತ್ತಿದ್ದರು. ಊರಿಗೆ ರಸ್ತೆ, ವಿದ್ಯುತ್, ದೇವಸ್ಥಾನ ನಿರ್ಮಾಣ ಲೀಲಾವತಿ ಅವರಿಂದಲೇ ಆಯಿತು ಎಂದು ಸೋಲದೇನವಹಳ್ಳಿಯ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇಂತಹ ನಟಿ, ಸಮಾಜ ಸೇವಕಿಯ ಹೆಸರನ್ನು ಬೆಂಗಳೂರಿನ ರಸ್ತೆಗೆ ಇಡಬೇಕು ಎನ್ನುವ ಆಗ್ರಹಕ್ಕೆ ರಾಜ್ಯ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications