ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಸಹೋದರ ನಿಧನ
ಬೆಂಗಳೂರು, ಜನವರಿ, 09: ಬೆಂಗಳೂರು ನಮ್ಮ ಮೆಟ್ರೋಗೆ ಧ್ವನಿ, ಕನ್ನಡ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅಪರ್ಣಾ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದರು. ಇದೀಗ ಅವರ ಸಹೋದರ ಸಹೋದರ ಚೈತನ್ಯ ಕೂಡ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಚಾರವನ್ನು ಫೇಸ್ ಬುಕ್‌ನಲ್ಲಿ ಅಪರ್ಣಾ ಅವರ ಪತಿ ನಾಗರಾಜ್ ರಾಮಸ್ವಾಮಿ ವಸ್ತಾರೆ ಹಂಚಿಕೊಂಡಿದ್ದಾರೆ.
ಅಪರ್ಣೆಯ ಅಣ್ಣ ಚೈತನ್ಯ ನಿನ್ನೆ (ಜನವರಿ 08) ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ಬರೆದುಕೊಳ್ಳುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಬೇಡಿಕೊಂಡಿದ್ದಾರೆ.

"ಕೆಲವು ಹೂವುಗಳು ಅರಳದೆ ಮೊಗ್ಗಾಗಿಯೇ ಉದುರಿಹೋಗುತ್ತವೆ. ಇನ್ನು ಕೆಲವು ಅರಳಿ ಹಣ್ಣಾಗದೆ ಕಮರುತ್ತವೆ. ಇನ್ನೂ ಕೆಲವನ್ನು ಒತ್ತಾಯದಿಂದ ಕೊಯ್ದು ಕತ್ತರಿಸಲಾಗುತ್ತದೆ. ಯಾರು ಯಾವುದೆಂದು ನಾನು ಈವರೆಗೂ ಅರಿತಿಲ್ಲ. ಅರಿಯುವ ಜಿಜ್ಞಾಸೆಯೂ ಈ ಹೊತ್ತಿನದಲ್ಲ.
ದಿನದಿಂದ ದಿನಕ್ಕೂ ನಾನು ಹೆಚ್ಚು ಹೆಚ್ಚು ಒಬ್ಬನಾಗುತ್ತಿರುವುದು ಯಾವೊತ್ತಿನ ಸತ್ಯ. ಬಹುಶಃ ಎಲ್ಲಾರೂ ಹಾಗೆ ಇರಬಹುದು," ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ತಮ್ಮ ಮದುವೆ ಸಂದರ್ಭದಲ್ಲಿ ಚೈತನ್ಯ ನಾರಾಯಣಸ್ವಾಮಿ ಇರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಮೆಟ್ರೋ ಧ್ವನಿ: ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರೂಪಕಿ ಅಪರ್ಣಾ ಅವರು ಶ್ವಾಸಕೋಶ ಕ್ಯಾನ್ಸರ್‌ನಿಂದ ಇತ್ತೀಚೆಗಷ್ಟೇ ನಿಧನರಾಗಿದ್ದರು. ಇವರು ಬರೀ ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್‌ಪೆಕ್ಟರ್ ವಿಕ್ರಂ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013ರಲ್ಲಿ ಬಿಗ್ ಬಾಸ್ ಶೋನಲ್ಲಿಯೂ ಭಾಗವಹಿಸಿದ್ದರು.
90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದಂತಹ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ಬಳಿಕ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಅಪರ್ಣ ಕಾರ್ಯ ನಿರ್ವಹಿಸಿದ್ದರು.
ಇನ್ನು ಅಪರ್ಣಾ ನಿಧನಕ್ಕೆ ಕನ್ನಡ ಚಿತ್ರ ರಂಗದ ಅನೇಕ ನಟ-ನಟಿಯರು ಅಪರ್ಣಾ ನಿಧನಕ್ಕೆ ಕಂಬನಿ ಮಿಡಿದಿದ್ದರು. ಹಾಗೆಯೇ ಬಿಎಂಆರ್‌ಸಿಎಲ್ ಸಿಬ್ಬಂದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದರು. ಇನ್ನು ಅಪರ್ಣಾ ಅವರ ಅಚ್ಚಕನ್ನಡದ ಸುಂದರ ಧ್ವನಿ ನಮ್ಮ ಮೆಟ್ರೋದಲ್ಲಿ ಈಗಲೂ ಜೀವಂತವಾಗಿದೆ.












Click it and Unblock the Notifications