ಪ್ರಪೋಸ್ ನೆಪದಲ್ಲಿ ಪ್ರಿಯಕರನ ಕಣ್ಣಿಗೆ ಬಟ್ಟೆ ಕಟ್ಟಿ ಬೆಂಕಿ ಹಚ್ಚಿದ ಯುವತಿ; ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ
ಬೆಂಗಳೂರು: ಪ್ರೀತಿಯಲ್ಲಿ ನಿರಾಸೆ ಮತ್ತು ನಿರ್ಲಕ್ಷ್ಯಕ್ಕೊಳಗಾದ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮನೆಗೆ ಕರೆಸಿ, ಕಣ್ಣಿಗೆ ಬಟ್ಟೆ ಕಟ್ಟಿ, ವಿದೇಶಿ ಶೈಲಿಯಲ್ಲಿ 'ಪ್ರಪೋಸ್' ಮಾಡುವ ನಾಟಕವಾಡಿ ಜೀವಂತವಾಗಿ ಸುಟ್ಟು ಕೊಂದಿರುವ ಆರೋಪ ಕೇಳಿಬಂದಿದೆ. ಯುವತಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು, ಮೈಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ದಹಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಕ್ಷಿಣ ಬೆಂಗಳೂರಿನ ಅಂಜನಾಪುರ ನಿವಾಸಿಯಾಗಿದ್ದ ಯುವತಿ ಮತ್ತು ಕಿರಣ್ (27) ಎಂಬುವವರು ಟೆಲಿಕಾಂ ಮಳಿಗೆಯೊಂದರಲ್ಲಿ ಸಹೋದ್ಯೋಗಿಗಳಾಗಿದ್ದರು. ಕಳೆದ ಒಂದು ವರ್ಷದಿಂದ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕಿರಣ್ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಮತ್ತು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾನೆ ಎಂಬ ಸಂಶಯ ಆಕೆಯನ್ನು ಕಾಡತೊಡಗಿತ್ತು. ಇದರಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದ ಆಕೆ, ಕಿರಣ್‌ನನ್ನು ಮುಗಿಸಲು ಸಂಚು ರೂಪಿಸಿದ್ದಳು ಎನ್ನಲಾಗಿದೆ.

ಪ್ರಪೋಸಲ್ ನಾಟಕ
ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಕಿರಣ್‌ನನ್ನು ತನ್ನ ಮನೆಗೆ ಆಹ್ವಾನಿಸಿದ್ದಳು. ಸ್ವಲ್ಪ ಸಮಯ ಮಾತನಾಡಿದ ನಂತರ, "ವಿದೇಶಗಳಲ್ಲಿ ಈಗ ಹೊಸ ಮಾದರಿಯ ಪ್ರಪೋಸಲ್ ಟ್ರೆಂಡ್‌ನಲ್ಲಿದೆ, ಅದರಂತೆ ನಿನಗೆ ಸರ್‌ಪ್ರೈಸ್ ನೀಡುತ್ತೇನೆ" ಎಂದು ನಂಬಿಸಿ ಆತನ ಕಣ್ಣಿಗೆ ಬಟ್ಟೆ ಕಟ್ಟಿ ಕುರ್ಚಿಯೊಂದಕ್ಕೆ ಕಟ್ಟಿಹಾಕಿದ್ದಳು. ಕಿರಣ್ ಇದನ್ನು ವಿರೋಧಿಸಿದಾಗ, ಪ್ರೀತಿಯ ನಾಟಕವಾಡಿ ಆತನನ್ನು ಸಮಾಧಾನಪಡಿಸಿದ್ದಾಳೆ.
ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ಕೃತ್ಯ
ಕಿರಣ್ ಕುರ್ಚಿಗೆ ಕಟ್ಟುಬಿದ್ದ ನಂತರ, ಈ ಸಂದರ್ಭದಲ್ಲಿ ಯುವತಿ ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಕಿರಣ್ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಜ್ವಾಲೆಯಲ್ಲಿ ಕಿರಣ್ ನರಳಾಡುತ್ತಿದ್ದರೆ, ಆಕೆ ಈ ಇಡೀ ದೃಶ್ಯವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸುತ್ತಾ, ಆತ ಸಾವನ್ನಪ್ಪುವವರೆಗೆ ನೋಡುತ್ತಾ ನಿಂತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿಯಕರನ ನಿರ್ಲಕ್ಷ್ಯಕ್ಕೆ ಯುವತಿ ಎಷ್ಟರಮಟ್ಟಿಗೆ ಕ್ರೂರವಾಗಿ ವರ್ತಿಸಿದ್ದಾಳೆ ಎಂದರೆ, ಕಿರಣ್ ಪ್ರಾಣ ಬಿಡುವ ದೃಶ್ಯವನ್ನು ರೆಕಾರ್ಡ್ ಮಾಡಿ ಆ ವಿಕೃತಿಯನ್ನು ವೀಕ್ಷಿಸಿದ್ದಾಳೆ. ಈ ಘಟನೆ ಬೆಂಗಳೂರಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತನನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಮೂಲದ ಕಿರಣ್ ಎಂದು ಗುರುತಿಸಲಾಗಿದೆ. ಕಿರಣ್ ಮತ್ತು ಆರೋಪಿ ಯುವತಿ ಇಬ್ಬರೂ ರಾಜಾಜಿನಗರದ ವೊಡಾಫೋನ್ ಕಚೇರಿಯಲ್ಲಿ ಸಹೋದ್ಯೋಗಿಗಳಾಗಿದ್ದರು. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇವರಿಬ್ಬರು ಕಳೆದ ಒಂದು ವರ್ಷದಿಂದ ಪರಿಚಿತರಾಗಿದ್ದರು ಮತ್ತು ಪ್ರೇಮ ಸಂಬಂಧದಲ್ಲಿದ್ದರು. ಇತ್ತೀಚೆಗೆ ಇವರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಕೊಲೆಗೆ ಪೂರ್ವ ತಯಾರಿ ನಡೆಸಿರುವ ಸಾಧ್ಯತೆಗಳಿದ್ದು, ಪೂರ್ಣ ಪ್ರಮಾಣದ ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರಣ್ ಮತ್ತು ಯುವತಿ ಇಬ್ಬರೂ ವೊಡಾಫೋನ್ ಸಂಸ್ಥೆಯ ವಿವಿಧ ಮಳಿಗೆಗಳಲ್ಲಿ ಸಿಮ್ ಕಾರ್ಡ್ ಮಾರಾಟ ಮತ್ತು ಗ್ರಾಹಕ ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ಬಗ್ಗೆ ಕಿರಣ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಆರೋಪಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಕಿರಣ್ ಕುಟುಂಬಸ್ಥರು ನೀಡುವ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ, ಬಂಧನ ಪ್ರಕ್ರಿಯೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಕಲಹ ಇಷ್ಟೊಂದು ಭೀಕರ ಅಂತ್ಯ ಕಂಡಿರುವುದು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ.












Click it and Unblock the Notifications