"ಬಿಬಿಎಂಪಿ ಕಮಿಷನರ್" ತನಿಖಾ ಸಂಸ್ಥೆಗೆ ದೂರು ಕೊಡಲೇ ಎಂದ ಬಿಜೆಪಿ ನಾಯಕ
ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಎಂದೂ ನಡೆಯದಷ್ಟು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ನಾಯಕ ಎನ್.ಆರ್ ರಮೇಶ್ ಹೇಳಿದ್ದು, ಈ ಸಂಬಂಧ ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಮಹಾಪೌರ ಪದ್ಧತಿ ಜಾರಿಗೆ ಬಂದ 76 ವರ್ಷಗಳ ಪಾಲಿಕೆಯ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರಗಳು ಮತ್ತು ಅಕ್ರಮಗಳು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಬಿಎಂಪಿಯ ನಗರ ಯೋಜನೆ ಇಲಾಖೆ, ರಸ್ತೆಗಳ ಮೂಲಭೂತ ಸೌಕರ್ಯ ಇಲಾಖೆ, ಯೋಜನೆ (ಕೇಂದ್ರ) ಇಲಾಖೆ, ರಾಜಕಾಲುವೆ, ಘನತ್ಯಾಜ್ಯ ನಿರ್ವಹಣೆ ಇಲಾಖೆ, ಕಲ್ಯಾಣ ಇಲಾಖೆ ಹಾಗೂ ಆಡಳಿತ ಇಲಾಖೆಗಳಲ್ಲಿ ವಿವಿಧ ಕಾಮಗಾರಿ ನಡೆಯುತ್ತಿದೆ. ಈ ಎಲ್ಲಾ ಕಾನೂನು ಬಾಹಿರ ಅನೈತಿಕ ಚಟುವಟಿಕೆಗಳು ತಮ್ಮ ಪರೋಕ್ಷ ಸಮ್ಮತಿಯ ಮೇಲೆಯೇ ನಡೆಯುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಎನ್.ಆರ್ ರಮೇಶ್ ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ಸಣ್ಣ ಪ್ರಮಾಣದ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ನಕ್ಷೆ ಮಂಜೂರಾತಿ ಕಾರ್ಯದ ಅನುಮೋದನೆಯನ್ನೂ ಸಹ ವಲಯದಿಂದ ಕೇಂದ್ರ ಕಚೇರಿಯ ಹೆಚ್ಚುವರಿ ನಿರ್ದೇಶಕರಿಗೆ ಕಳುಹಿಸಿ, ಆ ನಂತರ ಬೇರೆ ಯಾರೋ ದೂರವಾಣಿಯ Whatsapp Call ಗಳಲ್ಲಿ ಸೂಚಿಸಿದ LP Number ಗಳಿಗಷ್ಟೇ ಅನುಮೋದನೆ ನೀಡುವ ಕಾರ್ಯ ನಡೆದಿದೆ. ಪಾಲಿಕೆಯ ಯಾವುದೇ ಇಲಾಖೆಯ e - ಕಡತಗಳು ಸೇರಿದಂತೆ ಯಾವುದೇ ಕಡತಗಳನ್ನು ಸಂಬಂಧಪಟ್ಟ ಅಧಿಕಾರಿಯನ್ನು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ವ್ಯಕ್ತಿಗಳು ಅದನ್ನು ನೋಡಲು ಅವಕಾಶವಿರುವುದಿಲ್ಲ.
ಆದರೆ, ನಿತ್ಯ ಬಿಬಿಎಂಪಿ ಕಚೇರಿಯಲ್ಲಿರುವ ನಗರ ಯೋಜನೆಯ ಜಂಟಿ ನಿರ್ದೇಶಕರು (ಉತ್ತರ ಮತ್ತು ದಕ್ಷಿಣ) ಉಪ ನಿರ್ದೇಶಕರ ಕಚೇರಿಗಳಿಗೆ 8ಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳು ಹಾಗೂ ಪ್ರತೀ ವಲಯದಲ್ಲಿರುವ ಜಂಟಿ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಖಾಸಗಿ ವ್ಯಕ್ತಿಗಳು ಸಂಜೆ 5ರ ನಂತರ ಭೇಟಿ ಕೊಟ್ಟು ಆಯಾ ದಿನ ನಕ್ಷೆ ಮಂಜೂರಾತಿ ಕೋರಿ Online ನಲ್ಲಿ ಸಲ್ಲಿಕೆಯಾಗುವ ಪ್ರಾರಂಭಿಕ ಪ್ರಮಾಣ ಪತ್ರ (Commencement Certificate) ವನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳು ಮತ್ತು ಸ್ವಾಧೀನಾನುಭವ ಪತ್ರ (Occupancy Certificate) ಗಳನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಖುದ್ದು ಪರಿಶೀಲನೆ ಮಾಡಿ ಅದರ ವಿವರಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ಸಂಬಂಧಿಸಿದಂತೆ ಅಂತಿಮ ಹಂತದ ಸ್ವಾಧೀನಾನುಭವ ಪತ್ರ (Final Occupancy Certificate) ವನ್ನು ನೀಡಲು ಮಂತ್ರಿಗಳಿಗೆ ನೀಡಬೇಕೆಂದು 80 ಲಕ್ಷ ರೂಪಾಯಿಗಳಷ್ಟು ಮೊತ್ತವನ್ನು, ನಗರ ಯೋಜನೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ನೀಡಬೇಕೆಂದು 30 ಲಕ್ಷ ರೂಪಾಯಿಗಳಷ್ಟು ಹಣವನ್ನು ಮತ್ತು Occupancy Certificate ನೀಡುವ ಶುಲ್ಕವನ್ನಾಗಿ 33 ಲಕ್ಷ 50 ಸಾವಿರಗಳಷ್ಟು ಹಣವನ್ನು ಪಾವತಿಸಬೇಕೆಂದು ಕೇಳಿದ್ದಾರೆ ಎಂದು ಎನ್.ಆರ್ ರಮೇಶ್ ಅವರು ದೂರಿದ್ದಾರೆ. ಸರ್ಕಾರಿ ಇಲಾಖೆಗಳಿಗೆ ಖಾಸಗಿ ವ್ಯಕ್ತಿಗಳು ಆಗಮಿಸಿ ಸರ್ಕಾರದ ಮಾಹಿತಿಗಳನ್ನು / ಪಾಲಿಕೆಯ ಮಾಹಿತಿಗಳನ್ನು ಕೊಂಡೊಯ್ಯುತ್ತಿರುವುದು ಸರಿಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನು ಪಾಲಿಕೆಯ ಆಡಳಿತ ಇಲಾಖೆಗೆ ಸಂಬಂಧಿಸಿದಂತೆ, ವೈದ್ಯರು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನಿಯರಿಂಗ್ ಇಲಾಖೆಗಳಿಗೆ ಸಂಬಂಧಿಸಿದಂತೆ ಸೇವಾ ಜೇಷ್ಠತೆಯ ಆಧಾರದಲ್ಲಿ ಹಲವಾರು ಮಂದಿಗೆ ಕಾನೂನು ರೀತಿಯ ಮುಂಬಡ್ತಿ ನೀಡಿ ಈಗಾಗಲೇ ಆರರಿಂದ ಹತ್ತು ತಿಂಗಳುಗಳೇ ಕಳೆದಿದ್ದರೂ ಸಹ, ಅವರಿಗೆ ಇದುವರೆಗೆ ಅವರವರ ಸ್ಥಾನಗಳಲ್ಲಿ ನಿಯೋಜನೆಯೇ ಮಾಡದೇ ಇರುವ ಕಾರಣವೇನು ಎಂದು ಸಹ ಪ್ರಶ್ನಿಸಿದ್ದಾರೆ.
ರಾಜ್ಯದ ಅತ್ಯಂತ ಹಿರಿಯ ಐಎಎಸ್ ಅಧಿಕಾರಿಗಳಾಗಿರುವ ತಾವು ಬೇರೊಬ್ಬ ಭ್ರಷ್ಟರ ಕಾನೂನು ಬಾಹಿರ ಆದೇಶಗಳಿಗೆ ತಲೆಬಾಗಿ ಈ ರೀತಿ ನಿರಂತರವಾಗಿ ಕಾನೂನು ಬಾಹಿರ ಕಾರ್ಯಗಳನ್ನು ಎಸಗುತ್ತಿರುವುದು ಹಾಗೂ ಪಾಲಿಕೆಯ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ವ್ಯಾಪಕ ಭ್ರಷ್ಟಾಚಾರಗಳಿಗೆ ಮುಕ್ತವಾದ ಅವಕಾಶ ಕಲ್ಪಿಸಿರುವುದು ಪಾಲಿಕೆಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯಸ್ಥರಾಗಿರುವ ಮುಖ್ಯ ಆಯುಕ್ತರಾಗಿರುವ ಮತ್ತು ಆಡಳಿತಾಧಿಕಾರಿಗಳಾಗಿರುವ ತಮ್ಮ ವಿರುದ್ಧ ತನಿಖಾ ಸಂಸ್ಥೆಗಳಲ್ಲಿ ದೂರು ನೀಡಬಾರದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಈ ವಿಷಯವನ್ನೂ ಸಹ ಬೆಂಗಳೂರಿನ ಜನರ ಪರವಾಗಿ ತಮ್ಮಿಬ್ಬರನ್ನು ಕೇಳಲು ಇಚ್ಛಿಸುತ್ತೇನೆ ಎಂದು ಅವರು ಹೇಳಿದ್ದಾರೆ.












Click it and Unblock the Notifications