ಲಿಂಗಾಯತ ಧರ್ಮ ವಿವಾದ: 6 ತಿಂಗಳ ಸಮಯ ಕೇಳಿದ ತಜ್ಞರ ಸಮಿತಿ
ಬೆಂಗಳೂರು, ಜನವರಿ 06 : ರಾಜ್ಯದಲ್ಲಿ ವೀರಶೈವ ಹಾಗೂ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನ ಮಾನ ನೀಡುವ ಹಾಗೂ ಅಲ್ಪ ಸಂಖ್ಯಾತ ಸ್ಥಾನಮಾನವನ್ನು ನೀಡುವ ಕುರಿತು ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ತಜ್ಞರ ಸಮಿತಿ ಮೊದಲ ಸಭೆ ಶನಿವಾರ ವಿಕಾಸಸೌಧದಲ್ಲಿ ನಡೆಯಿತು.
ಸಭೆಯ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ. ಎಚ್,ಎನ್. ನಾಗಮೋಹನ್ ದಾಸ್ , ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಸರ್ಕಾರ ರವಾನಿಸಿದ್ದ 36 ಮಂದಿಯ ಪತ್ರಗಳು ಆಯೋಗದ ಮೂಲಕ ಸಮಿತಿ ಮುಂದೆ ಬಂದಿವೆ. ವೀರಶೈವ ಹಾಗೂ ಲಿಂಗಾಯತ ಧರ್ಮ ಸ್ಥಾಪನೆ ಅಥವಾ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಂತೆ ಮನವಿಯಲ್ಲಿ ಕೋರಲಾಗಿದೆ.
ಈ ವಿಷಯ ಕುರಿತಂತೆ ಅಧ್ಯಯನ ನಡೆಸಲು ಸರ್ಕಾರ ಸಮಿತಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ. ಆದರೆ ವಿಷಯ ತುಂಬಾ ವಿಸೃತ ಹಾಗೂ ಕಠಿಣವಾಗಿರುವುದರಿಂದ ಕನಿಷ್ಟ 06 ತಿಂಗಳುಗಳ ಕಾಲ ಅವಧಿ ನೀಡಬೇಕು ಎಂದು ಸರ್ಕಾರಕ್ಕೆ ಕೋರಲು ನಿರ್ಧರಸಿದ್ದೇವೆ. ಇದೇ ವೇಳೆ ಸಮಿತಿಯಲ್ಲಿ ಏಳು ಜನರ ಪೈಕಿ ಒಬ್ಬರೂ ಮಹಿಳೆಯರಿಲ್ಲ ಹೀಗಾಗಿ ಮಹಿಳೆಯನ್ನು ನೇಮಿಸುವಂತೆ ಸರ್ಕಾರಕ್ಕೆ ಕೋರಲಾಗುವುದು ಎಂದು ತಿಳಿಸಿದರು.

ಸಮಿತಿಗೆ ವೀರಶೈವ ಅಥವಾ ಲಿಂಗಾಯತ ಅಥವಾ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಂತೆ ಜನವರಿ 25 ರವರೆಗೆ ಸಾರ್ವಜನಿಕರಿಂದ ಅಹವಾಲು ಹಾಗೂ ದಾಖಲೆಗಳನ್ನು ಸ್ವೀಕರಿಸಲು ಸಮಿತಿ ನಿರ್ಧರಿಸಿದೆ. ಜನವರಿ ೮ ರಿಂದ ಸಾರ್ವಜನಿಕರು ಜನವರಿ ೨೫ರವರೆಗೆ ವೀರಶೈವ ಹಾಗೂ ಲಿಂಗಾಯತ ಧರ್ಮದ ಕುರಿತಂತೆ ತಮ್ಮ ಅಭಿಪ್ರಾಯ ಹಾಗೂ ದಾಖಲೆಗಳಿದ್ದರೆ ತಮ್ಮ ಅರ್ಜಿಯನ್ನು ಸಮಿತಿಗೆ ನೀಡಬಹುದು.
ಜನವರಿ 27ರ ನಂತರ ಸಭೆ ನಡೆಸಿ ಅರ್ಜಿ ಸಲ್ಲಿಸಿದ ಹಾಗೂ ದಾಖಲೆಗಳನ್ನು ಒದಗಿಸಿದ ರಿಂದ ಮೌಖಿಕವಾಗಿ ಅಭಿಪ್ರಾಯಗಳ ಕುರಿತಂತೆ ಚರ್ಚಿಸಲಾಗುವುದು ಎಂದು ಶನಿವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಮಿತಿ ಸದಸ್ಯರಾದ ರಾಮಕೃಷ್ಣ ಮರಾಠೆ, ಕರಜು ಕಾಟ್ಕರ್ ಎಸ್. ದ್ವಾರಕನಾಥ್, ಎಸ್.ಜಿ. ಸಿದ್ದರಾಮಯ್ಯ, ಪರುಷೋತ್ತಮ ಬಿಳಿಮಲೆ ಭಾಗವಹಿಸಿದ್ದರು. ಮತ್ತೊಬ್ಬ ಸದಸ್ಯರಾದ ಮುಜಾಫರ್ ಅಸಾದಿ ವಿದೇಶ ಪ್ರವಾಸದಲ್ಲಿರುವುದರಿಂದ ಅವರು ಗೈರು ಹಾಜರಾಗಿದ್ದರು.












Click it and Unblock the Notifications