ಬೆಂಗಳೂರಲ್ಲಿ 10 ನಿಮಿಷಕ್ಕೆ ₹50, ಅರ್ಧ ಗಂಟೆಗೆ ₹200 ಪಾರ್ಕಿಂಗ್ ಚಾರ್ಜ್! ಎಲ್ಲಿ ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ರೈಲ್ವೆ ನಿಲ್ದಾಣವನ್ನು ಜಾಗತಿಕ ವಿನ್ಯಾಸದಲ್ಲಿ ನಿರ್ಮಿಸಿರುವುದು ಗೊತ್ತೇ ಇದೆ. ಇದನ್ನು ಮೊದಲಿಗೆ ನೋಡಿದವರು ಇದು ಥೇಟ್ ಏರ್‌ಪೋರ್ಟ್ ಇದ್ದಂತಿದೆಯಲ್ಲ? ಎಂದು ಶಾಕ್ ಆಗುತ್ತಿದ್ದರು. ಏಕೆಂದರೆ, ವಿಮಾನ ನಿಲ್ದಾಣ ಮಾದರಿಯಲ್ಲೇ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಬರೋಬ್ಬರಿ 314 ಕೋಟಿ ರೂಪಾಯಿ ವೆಚ್ಚದಲ್ಲಿ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ಈ ಎಸ್‌ಎಂವಿಟಿ ನೋಡಲು ಸೊಗಸಾಗಿದೆ.
ಅಲ್ಲದೆ ನಿಲ್ದಾಣದಲ್ಲಿರುವ ಟಿಕೆಟ್ ಕೌಂಟರ್ ಹಾಗೂ ಮತ್ತು ನೆಲಮಹಡಿಯಲ್ಲಿ ವೇಟಿಂಗ್ ಹಾಲ್‌ಗಳು, ಮೊದಲ ಮಹಡಿಯಲ್ಲಿರುವ ಆಹಾರ ಕೌಂಟರ್‌ಗಳನ್ನು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿ (ಎ.ಸಿ) ನಿರ್ಮಿಸಲಾಗಿತ್ತು. ಹಾಗಾಗಿ, ಭಾರತದಲ್ಲೇ ಎ.ಸಿ. ವ್ಯವಸ್ಥೆ ಹೊಂದಿರುವ ಮೊದಲ ರೈಲ್ವೆ ಟರ್ಮಿನಲ್ ಎಂದೂ ಇದನ್ನು ಕರೆಯಲಾಗಿತ್ತು. ಹಾಗಾಗಿ ಇಲ್ಲಿಗೆ ಬಂದವರೆಲ್ಲ ನಿಲ್ದಾಣದ ವ್ಯವಸ್ಥೆ ಹಾಗೂ ಎ.ಸಿ ವ್ಯವಸ್ಥೆ ಕಂಡು ಬಾಯಿ ಮೇಲೆ ಕೈ ಇಟ್ಟು ನೋಡುತ್ತಿದ್ದರು.

ಈಗ ಇದೇ ನಿಲ್ದಾಣದಲ್ಲಿ ಮತ್ತೊಂದು ವಿಚಾರಕ್ಕೆ ಪ್ರಯಾಣಿಕರೆಲ್ಲ ಅಚ್ಚರಿಗೊಂಡಿದ್ದಾರೆ. ಅದೇನಂದ್ರೆ, ಪಾರ್ಕಿಂಗ್ ವಿಚಾರಕ್ಕೆ. ಹೌದು, ಈ ಟರ್ಮಿನಲ್‌ನಲ್ಲಿ ಹಾಕಿರುವ ಪಾರ್ಕಿಂಗ್ ಶುಲ್ಕದ ಬೋರ್ಡ್‌ವೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅಲ್ಲಿರುವ ಪಾರ್ಕಿಂಗ್ ಶುಲ್ಕ ಹಾಗೂ ಅದರ ನಿಯಮಗಳು ಎಂತವರಿಗೂ ಶಾಕ್ ನೀಡುವಂತಿದೆ.
ಬೋರ್ಡ್‌ನಲ್ಲಿ ಏನಿದೆ?: ದ್ವಿಚಕ್ರ ವಾಹನಗಳು, ಕಾರು, ಇನ್ನಿತರೆ ವಾಹನಗಳಿಗೆ ಮೊದಲ ಹತ್ತು ನಿಮಿಷಗಳವರೆಗೆ ಯಾವುದೇ ಪಾರ್ಕಿಂಗ್ ಶುಲ್ಕ ಇಲ್ಲ. ಆದರೆ ನಂತರ 10ರಿಂದ 20 ನಿಮಿಷಗಳವರೆಗೆ ಬೈಕ್ ಪಾರ್ಕಿಂಗ್ ಶುಲ್ಕ 40 ರೂಪಾಯಿ. ಮೂರು ಅಥವಾ ನಾಲ್ಕು ಚಕ್ರದ ವಾಹಗಳಿಗೆ 50 ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು 20ರಿಂದ 30 ನಿಮಿಷಗಳವರೆಗೆ ಪಾರ್ಕಿಂಗ್ ಮಾಡಿದರೆ ಬೈಕ್ ಸವಾರರು 100 ರೂಪಾಯಿ ಶುಲ್ಕ ಕಟ್ಟಬೇಕು.

ಇನ್ನು ಮೂರು ಚಕ್ರ ಹಾಗೂ ಕಾರುಗಳಿಗೆ ಬರೋಬ್ಬರಿ 200 ರೂಪಾಯಿ ಪಾರ್ಕಿಂಗ್ ಶುಲ್ಕ ವಿಧಿಸುವುದಾಗಿ ಬೋರ್ಡ್‌ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಬೋರ್ಡ್‌ನ ಫೋಟೋ ಅನ್ನು ಪ್ರಯಾಣಿಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಹಲವರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಇದು ʼಹಗಲು ದರೋಡೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ʼನಮ್ಮ ವಿಶ್ವ ದರ್ಜೆಯ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ (SMVT) ಪಾರ್ಕಿಂಗ್ ಶುಲ್ಕ ನೋಡಿ. ಈ "ಟಿಕೆಟ್" ವೆಚ್ಚದಲ್ಲಿ ನಮ್ಮ ಭಾರತದ ಅರ್ಧಭಾಗಕ್ಕೆ ಪ್ರಯಾಣಿಸಬಹುದು. ಇದು ಹಗಲು ದರೋಡೆʼ ಎಂದು ವ್ಯಂಗ್ಯ ಮಾಡಿದ್ದಾರೆ. ʼದೇಶದ ಈ ಮೊದಲ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ ಒಳಗೆ ಹೋದವರು ತಣ್ಣಗಾಗಬಹುದು. ಆದರೆ, ಈ ಪಾರ್ಕಿಂಗ್ ಶುಲ್ಕ ನೋಡಿದರೆ ಎಂತವರೂ ಬೆವರುತ್ತಾರೆʼ ಎಂದೆಲ್ಲ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಸುರಿದಿದ್ದ ಭಾರಿ ಮಳೆಗೆ ಉದ್ಘಾಟನೆಯಾದ ಒಂದೇ ವರ್ಷಕ್ಕೆ ಬೈಯಪ್ಪನಹಳ್ಳಿಯ ಈ ಅತ್ಯಾಧುನಿಕ ಸರ್ ಟರ್ಮಿನಲ್‌ನ ಛಾವಣಿ ಕುಸಿದು ಬಿದ್ದಿತ್ತು. ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದರು. ಭಾರಿ ಮಳೆಗೆ ಮೇಲ್ಛಾವಣಿ ಸ್ವಲ್ಪಮಟ್ಟಿಗೆ ಕುಸಿದು ಬಿದ್ದಿತ್ತು. ಈ ವೇಳೆ ಪ್ರವೇಶ ದ್ವಾರದಲ್ಲಿ ಸುಮಾರು 50 ಪ್ರಯಾಣಿಕರು ಕುಳಿತಿದ್ದರು. ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿರಲಿಲ್ಲ.












Click it and Unblock the Notifications