ಎಡಿಜಿಪಿ ಪ್ರಕರಣ : ಜಾರ್ಜ್ ರಾಜೀನಾಮೆಗೆ ಬಿಜೆಪಿ ಆಗ್ರಹ
ಬೆಂಗಳೂರು, ಮೇ 30 : ಎಡಿಜಿಪಿ ರವೀಂದ್ರನಾಥ್ ಪ್ರಕರಣದ ಬಗ್ಗೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ಆರಂಭವಾಗಿದೆ. ಸರ್ಕಾರ ಸಿಐಡಿ ತನಿಖೆಯನ್ನು ಒಂದು ತಿಂಗಳಿನಲ್ಲಿ ಪೂರ್ಣಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಈ ಕುರಿತು ಹೇಳಿಕೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆಜೆ ಜಾರ್ಜ್ ಪ್ರಕರಣವನ್ನು ಬಗೆಹರಿಸಲು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು. ಸರ್ಕಾರ ಒಂದು ತಿಂಗಳಿನಲ್ಲಿ ಸಿಐಡಿ ತನಿಖೆಯನ್ನು ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. [ರವೀಂದ್ರನಾಥ್ ಪರ ನಿಂತ ಮೀಸಲು ಪೊಲೀಸ್ ಪಡೆ]

ಆಡಳಿತದ ಮೇಲೆ ಹತೋಟಿ ತಪ್ಪಿದೆ : ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ಎಡಿಜಿಪಿ ರವೀಂದ್ರನಾಥ್ ಪ್ರಕರಣದಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತದ ಮೇಲಿನ ಹತೋಟಿಯನ್ನು ಕಳೆದುಕೊಂಡಿದ್ದಾರೆ ಎಂಬುದಕ್ಕೆ ಪ್ರಕರಣ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. [ಪೊಲೀಸರ ಗಲಾಟೆ : ಸರ್ಕಾರದ ಕಿವಿ ಹಿಂಡಿದ ರಾಜ್ಯಪಾಲರು]
ಜಾರ್ಜ್ ರಾಜೀನಾಮೆ ಪಡೆಯಿರಿ : ರವೀಂದ್ರನಾಥ್ ಪ್ರಕರಣವನ್ನು ಬಗೆಹರಿಸಲು ಗೃಹ ಸಚಿವ ಕೆಜೆ ಜಾರ್ಜ್ ವಿಫಲರಾಗಿದ್ದಾರೆ, ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಪ್ರಹ್ಲಾದ್ ಜೋಶಿ, ಪ್ರಕರಣವನ್ನು ಮೊದಲದಿನವೇ ಇಲಾಖಾ ಮಟ್ಟದಲ್ಲೇ ಬಗೆಹರಿಸಬಹುದಾಗಿತ್ತು. ಆದರೆ, ಗೃಹ ಸಚಿವ ಅಮರ್ಥತೆಯಿಂದಾಗಿ ಪ್ರಕರಣ ಇಷ್ಟೊಂದು ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಪ್ರಕರಣಕ್ಕೆ ನೇರವಾದ ಹೊಣೆಗಾರರು ಎಂದು ಜೋಶಿ ಟೀಕಿಸಿದರು.












Click it and Unblock the Notifications