ಬೆಂಗಳೂರಿನಲ್ಲಿ ನಾಳೆಯಿಂದ ಎಸ್ಎಂ ಕೃಷ್ಣ ರೋಡ್ ಶೋ
ಬೆಂಗಳೂರು, ಏಪ್ರಿಲ್ 1: ಮುಂಬರುವ ಲೋಕಸಭಾ ಚುನಾವಣೆಗಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಲು ಮಾಜಿ ವಿದೇಶಾಂಗ ಸಚಿವ, ಹಿರಿಯ ಕಾಂಗ್ರೆಸ್ಸಿಗ ಎಸ್ ಎಂ ಕೃಷ್ಣ ಅವರು ನಗರದಲ್ಲಿ ನಾಳೆ ರೋಡ್ ಶೋ ನಡೆಸಲಿದ್ದಾರೆ.
ಹೌದು, ರಾಜಧಾನಿ ಬೆಂಗಳೂರಿನ ವ್ಯಾಪ್ತಿಗೆ ಬರುವ ಎಲ್ಲ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಎಸ್ ಎಂ ಕೃಷ್ಣ ಅವರು ಮೂರು ದಿನ ಪ್ರಚಾರ ನಡೆಸಲಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಪಲ್ಲವಿ ಥಿಯೇಟರ್ ಬಳಿಯಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ನಡೆಸಿ, ರೋಡ್ ಶೋ ಆರಂಭಿಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್ ಮತ್ತು ಕೆಜೆ ಜಾರ್ಜ್ ಮತ್ತಿತರರು ನಾಳೆ ರೋಡ್ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಸ್ ಎಂ ಕೃಷ್ಣ ರೋಡ್ ಶೋ ಬಗ್ಗೆ ಮಾಹಿತಿ ನೀಡಿದ ವಾರ್ತಾ ಸಚಿವ ರೋಶನ್ ಬೇಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮಧ್ಯಾಹ್ನ 1.30ರವರೆಗೂ ಬೆಂಗಳೂರು ಕೇಂದ್ರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಎಸ್ ಎಂ ಕೃಷ್ಣ ಅವರು ಈ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಶಿವಾಜಿನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಲು ಎಸ್ ಎಂ ಕೃಷ್ಣ ಅವರ ದೂರದೃಷ್ಟಿಯ ಯೋಜನೆಗಳೇ ಕಾರಣ. ಮಾಹಿತಿ ತಂತ್ರಜ್ಞಾನ ಹಾಗೂ ಮೂಲಕ ಸೌಕರ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಜನ ಅರಿತಿದ್ದಾರೆ. ಹಿರಿಯರಾದ ಅವರ ಪ್ರಚಾರದಿಂದ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ಬೆಂಗಳೂರು ಸೆಂಟ್ರಲ್ ಸೇರಿದಂತೆ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಗಳಿಸಲಿದೆ ಎಂದು ರೋಶನ್ ಬೇಗ್ ತಿಳಿಸಿದ್ದಾರೆ.












Click it and Unblock the Notifications