Industry: ಖ್ಯಾತ ಕ್ರಿಕೆಟಿಗನಿಂದ ಕರ್ನಾಟಕದ ಈ ಜಿಲ್ಲೆಯಲ್ಲಿ ₹1,400 ಕೋಟಿ ಹೂಡಿಕೆ
ಬೆಂಗಳೂರು, ಜೂನ್ 18: ಕರ್ನಾಟಕದಲ್ಲಿ ಈಗಾಗಲೇ ಅನೇಕ ಕಂಪನಿಗಳು, ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಿ ಕೈಗಾರಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದಾರೆ. ಈ ಸಾಲಿಗೆ ಖ್ಯಾತ ಕ್ರಿಕೆಟಿಗರು ಸೇರಿದ್ದಾರೆ. ಅವರು ಸಹ ರಾಜ್ಯದಲ್ಲಿ ಹಂತ ಹಂತವಾಗಿ ಬರೋಬ್ಬರಿ ₹1,400 ಕೋಟಿ ಹೂಡಿಕೆ ಮಾಡಲಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ತಂಪು ಪಾನೀಯ ಮತ್ತು ಸಿಹಿ ತಿಂಡಿಗಳ ಉದ್ಯಮ ಆರಂಭಿಸುತ್ತಿದ್ದಾರೆ. ಹಂತಹಂತವಾಗಿ ಒಟ್ಟು 1,400 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಾಹಿತಿ ನೀಡಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ವಿಚಾರವಾಗಿ ಭೇಟಿಯಾದ ಮುತ್ತಯ್ಯ ಅವರೊಂದಿಗೆ ಸಚಿವ ಎಂಬಿ ಪಾಟೀಲ್ ಅವರು ಮಾತುಕತೆ ನಡೆಸಿದರು.
ಆರಂಭದಲ್ಲಿ 230 ಕೋಟಿ ರೂ. ಹೂಡಿಕೆಗೆ ಚಿಂತನೆ
ಚಾಮರಾಜನಗರದ ಬದನಕುಪ್ಪೆಯಲ್ಲಿ ಮುರಳೀಧರನ್ ಅವರು 'ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್' ಎನ್ನುವ ಬ್ರ್ಯಾಂಡ್ ನಲ್ಲಿ ತಮ್ಮ ಉದ್ದಿಮೆ ಆರಂಭಿಸುತ್ತಿದ್ದಾರೆ. ಶುರುವಿನಲ್ಲಿ 230 ಕೋಟಿ ರೂಪಾಯಿ ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ನಂತರ ಅದು ಈಗ ಸಾವಿರ ಕೋಟಿ ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆ ಎಂದು ಅವರು ವಿವರಿಸಿದರು.
ಇದಕ್ಕಾಗಿ ಅವರಿಗೆ ಈಗಾಗಲೇ 46 ಎಕರೆ ಭೂಮಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣಪುಟ್ಟ ತೊಡಕುಗಳಿದ್ದವು. ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬದನಕುಪ್ಪೆಯಲ್ಲಿ ಮುಂಬರುವ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ ಎಂದು ಅವರು ಹೇಳಿದರು.

ಧಾರವಾಡದಲ್ಲಿ ಉದ್ಯಮ ಘಟಕ
ಮುಂಬರುವ ದಿನಗಳಲ್ಲಿ ಮುತ್ತಯ್ಯ ಧಾರವಾಡದಲ್ಲಿ ಕೂಡ ತಮ್ಮ ಉದ್ಯಮದ ಒಂದು ಘಟಕ ಸ್ಥಾಪಿಸಲಿದ್ದಾರೆ ಎಂದು ಸಚಿವರು ಹೇಳಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಪ್ರತಿಭಟನೆ ಬರೀ ನಾಟಕ: ಸಚಿವ
ಬಿಜೆಪಿ ನಾಯಕರು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 400, 38 ಮತ್ತು 35 ರೂ. ದುಬಾರಿ ಆಗಿದೆ. ಆಗ ತೆಪ್ಪಗಿದ್ದ ಬಿಜೆಪಿಯ ಅಶೋಕ್ ಮತ್ತು ವಿಜಯೇಂದ್ರ ಗ್ಯಾಂಗ್ ಈಗ ಪ್ರತಿಭಟಿಸುತ್ತಿರುವುದು ಬರೀ ನಾಟಕ ಎಂದು ಹೇಳಿದರು.












Click it and Unblock the Notifications