ಕೈಗೆಟುಕುವ ದರದಲ್ಲಿ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕು: ಸಚಿವ ಡಾ. ಅಶ್ವತ್ಥ ನಾರಾಯಣ
ಬೆಂಗಳೂರು, ಜುಲೈ 31: ಆಯುಷ್ ವೈದ್ಯಕೀಯ ಪದ್ಧತಿ ಸೇರಿದಂತೆ ಹಲವು ದೇಶಿಯ ಧ್ಯಾನ ಪರಂಪರೆಗಳ ಬೆಳವಣಿಗೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಸಂಬಂಧಿಸಿದ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆಯಲಾಗುವುದು ಎಂದು ಐಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಜಿಜ್ಞಾಸ ರಾಷ್ಟ್ರೀಯ ಆರೋಗ್ಯ ಉತ್ಸವದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದ ಅವರು, "ಕೃತಕ ಉಪಗ್ರಹ ತಂತ್ರಜ್ಞಾನ ಅಗಾಧವಾಗಿ ಬೆಳೆದಿದೆ. ಇದನ್ನು ಜನಸಮುದಾಯಗಳ ಒಳಿತಿಗೆ ಬಳಸಿಕೊಂಡು ನಾವು ಮುನ್ನಡೆಯಬೇಕಾಗಿದೆ" ಎಂದು ಅಭಿಪ್ರಾಯಪಟ್ಟರು.
ಆಳುವ ಸರ್ಕಾರಗಳಿಗೆ ಪ್ರಬಲ ಇಚ್ಛಾಶಕ್ತಿ ಇದ್ದಾಗ ಎಂತಹ ಪರಿವರ್ತನೆಯನ್ನು ಬೇಕಾದರೂ ತರಲು ಸಾಧ್ಯವಿದೆ. ರಾಜ್ಯ ಮತ್ತು ಕೇಂದ್ರಗಳಲ್ಲಿರುವ ಬಿಜೆಪಿ ಸರ್ಕಾರಗಳು ತಮ್ಮ ಸಕಾರಾತ್ಮಕ ಮನೋಭಾವದೊಂದಿಗೆ ಇದನ್ನು ಮಾಡಿ ತೋರಿಸಿವೆ ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದರು.

ಆಧುನಿಕ ಜೀವನಶೈಲಿಯಿಂದ ಹಲವು ಬಗೆಯ ಸಂಕೀರ್ಣ ಆರೋಗ್ಯ ಸಮಸ್ಯೆಗಳು ಇಂದು ಕಾಡುತ್ತಿವೆ ಹೀಗಿರುವಾಗ ಕೈಗೆಟಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಗಳು ಸಿಗುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದರು.
ವೈದ್ಯಕೀಯ ಚಿಕಿತ್ಸೆಗಳು ದುಬಾರಿಯಾಗಬಾರದು
ಪ್ರಯೋಗಾಲಯಗಳಲ್ಲಿ ಮತ್ತು ವಿಜ್ಞಾನದ ಬಲದಿಂದ ರೂಪಗೊಳ್ಳುವ ಚಿಕಿತ್ಸೆಗಳು ಸಾಮಾನ್ಯರಿಗೆ ತಲುಪಬೇಕು. ಇದನ್ನು ನಮ್ಮ ಸರ್ಕಾರ ಮಾಡಿ ತೋರಿಸಲಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲೂ ಕರ್ನಾಟಕವು ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಯುಷ್ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆದಾರರು ಬಂಡವಾಳ ತೊಡಗಿಸಬೇಕು. ಇದಕ್ಕೆ ಭಾರಿ ದೊಡ್ಡ ಮಾರುಕಟ್ಟೆ ಇದ್ದು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸಮಾಜದ ಸಬಲೀಕರಣವು ಕೂಡ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೈದ್ಯಕೀಯ ಚಿಕಿತ್ಸೆಗಳು ದುಬಾರಿಯಾದರೆ ಪ್ರಯೋಜನವಿಲ್ಲ. ಇವು ವಾಸ್ತವವಾಗಿ ಸೇವಾ ವಲಯದಲ್ಲಿ ಬರಬೇಕು. ಈ ಮೂಲಕ ವೈದ್ಯಕೀಯ ವೃತ್ತಿಗೆ ಗೌರವ ಮತ್ತಷ್ಟು ಹೆಚ್ಚಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಜ್ಞಾಸ ಮುಖ್ಯಸ್ಥ ಡಾ ಅಲ್ಲಮ ಪ್ರಭು ಮತ್ತು ಉನ್ನತ ಅಧಿಕಾರಿ ನಿರಂಜನ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications